ಆಷಾಢ ಮಾಸ ‘ಅಶುಭ’ ಎಂಬ ನಂಬಿಕೆಯಾಕೆ?

ಹಿಂದೂ ಧರ್ಮದ ತಳಹದಿಯಲ್ಲಿ ಹಲವು ಮೂಲಗಳು, ಹಲವು ಗ್ರಂಥಗಳು ಮತ್ತು ಹಲವು ನಂಬಿಕೆಗಳು ಇರುವ ಕಾರಣ ಹಿಂದೂ ಇಲ್ಲಿ, ನಂಬಿಕೆ ಮತ್ತು ಸಂಸ್ಕೃತಿಯಲ್ಲಿ ಬಹಳ ವೈವಿಧ್ಯತೆ ಇದೆ. ಮಳೆಗಾಲದಲ್ಲಿ ಬರುವ ಆಷಾಢ ಮಾಸ ಹಿಂದೂ ಕ್ಯಾಲೆಂಡರ್ ಪ್ರಕಾರ ಮೂರನೆಯ ತಿಂಗಳಾಗಿದ್ದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜೂನ್-ಜುಲೈ ತಿಂಗಳ ಅವಧಿಯಲ್ಲಿ ಆಗಮಿಸುತ್ತದೆ. ಈ ಅವಧಿಯಲ್ಲಿ ಭಾರತದಾದ್ಯಂತ ಮಾನ್ಸೂನ್ ಮಾರುತಗಳು ತಮ್ಮೊಂದಿಗೆ ಭಾರೀ ಮಳೆಯನ್ನು ತರುವ ಜೊತೆಗೇ ಕೃಷಿಯಾಧಾರಿತ ದೇಶವಾದ ಭಾರತದ ಜನರಿಗೆ ಕೈತುಂಬಾ ಕೆಲಸ ನೀಡುತ್ತದೆ. ಹಿಂದಿನ ತಿಂಗಳುಗಳಲ್ಲಿ ಬಿಸಿಲ ಬೇಗೆಗೆ ಬೆಂದಿದ್ದ ನೆಲ ಮಳೆಯ ಹನಿಯಿಂದ ಒದ್ದೆಯಾಗುತ್ತಿದ್ದಂತೆಯೇ ಕೀಟಗಳಿಂದ ಹಿಡಿದು ವನ್ಯಮೃಗಗಳವರೆಗೆ ಎಲ್ಲಾ ಜೀವಿಗಳು ಮಳೆಗಾಲದ ಜೀವನಕ್ಕೆ ಹೊಂದಿಕೊಳ್ಳಲು ತಯಾರಾಗುತ್ತವೆ. ಒಣಗಿದ ಬೀಜಗಳೆಲ್ಲಾ ಮೊಳಕೆಯೊಡೆದು ಪುಟಿದು ನಿಲ್ಲುವ ತವಕದಲ್ಲಿ ಕೆಲವೇ ದಿನಗಳಲ್ಲಿ ಸುತ್ತೆಲ್ಲಾ ಹಸಿರೇ ಹಸಿರು ತುಂಬಿ ತುಳುಕುತ್ತದೆ. ಅತ್ಯಂತ ಸುಂದರ ನೋಟವನ್ನು ನೀಡುವ ಈ ಜಗತ್ತು ಅಷ್ಟು ಮಳೆ ಬರುತ್ತಿದ್ದರೂ ಪ್ರಕೃತಿ ಬೆಚ್ಚಗಿದ್ದು ತನ್ನ ಒಡಲಿನಲ್ಲಿ ನಮ್ಮನ್ನೆಲ್ಲಾ ಸಲಹಿದಂತೆ ಅನ್ನಿಸುತ್ತದೆ.   ಎಲ್ಲೂ ಕಾಣದ ಅನೂಹ್ಯ ಸಂಸ್ಕೃತಿ- ನಮ್ಮ ಭಾರತ ಆದರೆ ಹಿಂದೂ ಸಂಸ್ಕೃತಿಯ ಪ್ರಕಾರ ಆಷಾಢ ಮಾಸ ಅಮಂಗಳಕರವಾಗಿದೆ. ಅಂದರೆ ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳನ್ನು ನೆರವೇರಿಸಿದರೆ ಇದಕ್ಕೆ ದೇವರ ಅನುಗ್ರಹ ಸಿಗುವುದಿಲ್ಲ. ಪವಿತ್ರ ಕಾರ್ಯಗಳಾದ ಮದುವೆ, ಗೃಹಪ್ರವೇಶ, ಉಪನಯನ ಮೊದಲಾದವುಗಳನ್ನು ಆಷಾಢಕ್ಕೂ ಮೊದಲು ಅಥವಾ ಆಷಾಢ ಕಳೆದ ಬಳಿಕವೇ ನೆರವೇರಿಸುವಂತೆ ಹಿರಿಯರು ಸಲಹೆ ಮಾಡುತ್ತಾರೆ. ಹಾಗಾಗಿ ಹೆಚ್ಚಿನ ಏನೂ ಕಾರ್ಯ ನಡೆಯದ ಈ ತಿಂಗಳಿಗೆ ಶೂನ್ಯಮಾಸ ಎಂಬ ಅನ್ವರ್ಥನಾಮವೂ ಇದೆ. ಆದರೆ ಈ ತಿಂಗಳನ್ನೇಕೆ ಶೂನ್ಯಮಾಸವಾಗಿ ಆಚರಿಸುವಂತೆ ನಮ್ಮ ಹಿರಿಯರು ನಿರ್ಧಾರ ಕೈಗೊಂಡರು ಎಂಬ ವಿಚಾರವನ್ನು ವೈಜ್ಞಾನಿಕವಾಗಿ ಕೆದಕಿದರೆ ಇದಕ್ಕೆ ಕೆಲವು ಸೋಜಿಗದ ಉತ್ತರಗಳು ದೊರಕುತ್ತವೆ. ಹೌದಲ್ಲಾ, ಎಂಬ ಉದ್ಗಾರದೊಂದಿಗೆ ನಮ್ಮ ಪೂರ್ವಜರ ಜಾಣ್ಮೆಯನ್ನು ಮೆಚ್ಚುವ ಹಾಗಾಗುತ್ತದೆ. ಏನಿದು ಈ ಆಷಾಢ ಮಾಸದ ಶೂನ್ಯ ಮಹತ್ವ ಎಂಬ ಕುತೂಹಲ ಉಂಟಾಯಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ…..

ಶೂನ್ಯಮಾಸದಲ್ಲಿ ಯಾವುದೇ ಶುಭಕಾರ್ಯವಿಲ್ಲ ಹಿಂದೂ ಪುರಾಣ ಮತ್ತು ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ತಿಂಗಳು ಅಮಂಗಳಕರವಾಗಿದೆ. ಈ ಅವಧಿಯಲ್ಲಿ ನಡೆಸುವ ಯಾವುದೇ ಶುಭಕಾರ್ಯಕ್ಕೆ ದೇವರ ಅನುಗ್ರಹ ಸಿಗದು. ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಗಳನ್ನು ಈ ಮಾಸದಲ್ಲಿ ನಡೆಸಲಾಗುವುದಿಲ್ಲ.

ಶೂನ್ಯಮಾಸದಲ್ಲಿ ಯಾವುದೇ ಶುಭಕಾರ್ಯವಿಲ್ಲ ಇದಕ್ಕೆ ದೈವಿಕ ಕಾರಣವನ್ನು ಹಿರಿಯರು ಸಂದರ್ಭಾನುಸಾರವಾಗಿ ಬಳಸಿರಬಹುದಾದರೂ ಇನ್ನೊಂದು ದೃಷ್ಟಿಯಿಂದ ನೋಡಿದಾಗ ಇದು ಅಪ್ಪಟ ಮಳೆಗಾಲವಾಗಿದ್ದು ಯಾವುದೇ ಶುಭಕಾರ್ಯವನ್ನು ಈ ಅವಧಿಯಲ್ಲಿ ನಿರ್ವಹಿಸುವುದಾದರೆ ಅತಿಥಿಗಳಿಗೂ ಅತಿಥೇಯರಿಗೂ ಎಷ್ಟು ಕಷ್ಟವಾಗಬಹುದು, ಎಂದೇ ಈ ಅವಧಿಯಲ್ಲಿ ಶುಭಕಾರ್ಯ ಬೇಡ ಎಂದಿರಬಹುದು.

ದಾಂಪತ್ಯದ ಸಂಗಕ್ಕೂ ದೂರ ಈ ಅವಧಿಯಲ್ಲಿ ನಡೆಸುವ ಮದುವೆಯ ಬಳಿಕ ಕೂಡಿದ ದಂಪತಿಗಳಿಗೆ ಹುಟ್ಟುವ ಸಂತಾನ ಒಂಭತ್ತು ತಿಂಗಳ ಬಳಿಕ ಬರುವ ಚೈತ್ರ ಮಾಸದಲ್ಲಿ ಆಗುತ್ತದೆ. ಅಂದರೆ ಆಗ ಬಿರುಬೇಸಿಗೆಯ ದಿನವಾಗಿರುತ್ತದೆ. ಬಿರುಬೇಸಿಗೆಯ ದಿನಗಳಲ್ಲಿ ಹೆರಿಗೆ ಅಂದಿನ ದಿನಗಳಲ್ಲಿ ಭಾರೀ ತ್ರಾಸದಾಯಕವಾಗುತ್ತಿದ್ದು ಇದನ್ನು ತಡೆಯಲೆಂದೇ ಆಷಾಢ ಮಾಸವನ್ನು ಅಮಂಗಳಕರವಾಗಿರಿಸುವುದು ವೈಜ್ಞಾನಿಕವಾಗಿ ಒಪ್ಪಬಹುದಾದ ತರ್ಕವಾಗಿದೆ.

ಅತ್ತೆ-ಸೊಸೆಯರು ಪರಸ್ಪರ ದೂರಾಗುವ ಮಹತ್ವ ಆಷಾಢ ಮಾಸದಲ್ಲಿ ಅತ್ತೆ ಸೊಸೆಯರನ್ನು ಬೇರೆ ಬೇರೆಯಾಗಿಸುವುದಕ್ಕೆ ಸ್ಪಷ್ಟ ಕಾರಣವನ್ನು ಹುಡುಕುವುದು ಕಷ್ಟ. ಒಂದು ಸ್ಥೂಲ ಅಂದಾಜಿನಂತೆ ಹಿಂದಿನ ದಿನಗಳಲ್ಲಿ ಕೂಡುಕುಟುಂಬವೇ ಹೆಚ್ಚು ಬಳಕೆಯಲ್ಲಿದ್ದಾಗ ಅತ್ತೆ ಸೊಸೆಯರ ನಡುವೆ ಹಿಂದಿನ ದಿನಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯ ಮತ್ತು ಇದರ ಮೂಲಕ ಎದುರಾಗುವ ಕಲಹಗಳನ್ನು ಮರೆಯಲು, ಒಬ್ಬರ ಕೊರತೆಯನ್ನು ಇನ್ನೊಬ್ಬರು ಅರಿತು ಮುಂದಿನ ದಿನಗಳಲ್ಲಿ ಮತ್ತೆ ಸಂತಸದಿಂದ ಜೊತೆಯಾಗಿ ಬಾಳುವೆ ಮಾಡಲು ಈ ಪರಿಯನ್ನು ನಮ್ಮ ಹಿರಿಯರು ಯೋಜಿಸಿದ್ದಿರಬಹುದು.

ಹೆಣ್ಣುಮಕ್ಕಳಿಗೆ ಮದರಂಗಿಯ ಸಂಭ್ರಮ ಮಳೆಗಾಲದ ಆಗಮನವಾಗುತ್ತಿದ್ದಂತೆಯೇ ಗಾಳಿಯಲ್ಲಿ ಆವರಿಸುವ ಸೋಂಕಿನಿಂದ ರಕ್ಷಿಸಿಕೊಳ್ಳಲು ಚರ್ಮಕ್ಕೆ ಮದರಂಗಿ ಹಚ್ಚಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಇದರಿಂದ ಚರ್ಮದ ಮೂಲಕ ಆಗಮಿಸುವ ಸೋಂಕಿನಿಂದ ರಕ್ಷಣೆ ಪಡೆದಂತಾಗುತ್ತದೆ ಎಂದು ಹಿಂದಿನವರು ಭಾವಿಸಿದ್ದರು.

ಹೆಣ್ಣುಮಕ್ಕಳಿಗೆ ಮದರಂಗಿಯ ಸಂಭ್ರಮ ಅಂತೆಯೇ ಆಷಾಢ ಮಾಸದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ಮಹಿಳೆಯರು ತಮ್ಮ ಕೈಕಾಲುಗಳಿಗೆ ಮದರಂಗಿ ಹೆಚ್ಚಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಶುಭಕಾರ್ಯವಿದ್ದರೆ ಮದರಂಗಿ ಹಚ್ಚಿಕೊಳ್ಳಲು ಸಾಧ್ಯವಾಗದೇ ಹೋಗಬಹುದು, ತನ್ಮೂಲಕ ಆರೋಗ್ಯಕ್ಕೆ ಮದರಂಗಿಯ ರಕ್ಷಣೆಯಿಂದ ವಂಚಿತರಾಗಬಹುದು ಎಂದೇ ಈ ಅವಧಿಯಲ್ಲಿ ಶುಭಕಾರ್ಯ ಬೇಡ ಎಂದಿರಬಹುದು.

ಪೂಜೆಗಳು ಮತ್ತು ವ್ರತಕ್ಕೆ ದೊರಕುವ ಸಮಯ ಈ ಅವಧಿಯಲ್ಲಿ ಮನೆಯಲ್ಲಿ ಮಾಡುವ ಶುಭಕಾರ್ಯ ಬೇಡವೆಂದರೇ ಹೊರತು ಸಮಾಜಿಕವಾಗಿ ನಡೆಸುವ ಕಾರ್ಯಗಳಿಗೆ ಹಿರಿಯರು ಬೇಡ ಎನ್ನಲಿಲ್ಲ. ಅಂತೆಯೇ ಯಾರ ಮನೆಯಲ್ಲಿಯೂ ಶುಭಕಾರ್ಯವಿಲ್ಲದೇ ಇರುವ ಕಾರಣ ಸಾಮಾಜಿಕ ಕಾರ್ಯಕ್ಕೆ ಎಲ್ಲರೂ ಲಭ್ಯರಿರುತ್ತಾರೆ.

ಪೂಜೆಗಳು ಮತ್ತು ವ್ರತಕ್ಕೆ ದೊರಕುವ ಸಮಯ ಅಂದರೆ ಇನ್ನೊಂದರ್ಥದಲ್ಲಿ ಸಾಮಾಜಿಕ ಕಾರ್ಯಗಳಿಗೆ ಎಲ್ಲರೂ ಲಭ್ಯರಿರಬೇಕು ಎಂಬ ಕಾರಣಕ್ಕೇ ಆಷಾಢ ಮಾಸದಲ್ಲಿ ಶುಭಕಾರ್ಯ ಬೇಡ ಎಂದಿರಬಹುದು. ಇದೇ ಕಾರಣಕ್ಕೆ ರಥಯಾತ್ರೆ, ಚತುರ್ಮಾಸ ವೃತ, ಪಾಲ್ಕಿ ಯಾತ್ರಾ ಮೊದಲಾದ ಮೆರವಣಿಗೆ ಮತ್ತು ಪೂಜೆಗಳೆಲ್ಲಾ ಆಷಾಢ ಮಾಸದಲ್ಲಿಯೇ ಜರುಗುತ್ತವೆ. ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿಯಿಂದ ಭಾಗವಹಿಸುತ್ತಾರೆ.

ಮಳೆಗಾಲದ ಕೆಲಸಕ್ಕೆ ದೈವಿಕ ಭಾವನೆಯ ಭದ್ರತೆ ಯಾವುದೇ ಕೆಲಸವನ್ನು ದೇವರ ಪೂಜೆಯೊಂದಿಗೆ ಪ್ರಾರಂಭಿಸುವುದು ಹಿಂದೂ ಸಂಪ್ರದಾಯದಲ್ಲಿದೆ. ಮನೆ ಕಟ್ಟುವ ಮುನ್ನ ಗುದ್ದಲಿ ಪೂಜೆ ಸಹಿತ ಕೃಷಿ ಕಾರ್ಯಕ್ಕೆಲ್ಲಾ ದೇವರ ಪೂಜೆ ಮತ್ತು ವೃತಗಳು ಸಹಕಾರಿ ಎಂದು ಜನರು ನಂಬುತ್ತಾರೆ.

ಮಳೆಗಾಲದ ಕೆಲಸಕ್ಕೆ ದೈವಿಕ ಭಾವನೆಯ ಭದ್ರತೆ ಆಷಾಢ ಮಾಸದಲ್ಲಿ ಆರಂಭವಾಗುವ ಕೃಷಿ ಚಟುವಟಿಕೆಗಳನ್ನು ಈ ಮಾಸದಲ್ಲಿ ನಡೆಸುವ ಪೂಜೆ ವೃತಗಳ ಮೂಲಕ ಪ್ರಾರಂಭಿಸಿದರೆ ಈ ವರ್ಷದ ಬೆಳೆ ಹುಲುಸಾಗುತ್ತದೆ, ಜೀವನ ಹಸನಾಗುತ್ತದೆ ಎಂದು ನಮ್ಮ ಹಿರಿಯರು ನಂಬಿಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *