You are here
Home > Health Tips > ಕಿಡ್ನಿಯಲ್ಲಿ ಸಮಸ್ಯೆ : 7 ಲಕ್ಷಣಗಳು

ಕಿಡ್ನಿಯಲ್ಲಿ ಸಮಸ್ಯೆ : 7 ಲಕ್ಷಣಗಳು

ನಿತ್ಯದ ಚಟುವಟಿಕೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಪಡೆಯಲು ನಾವು ಘನ ಮತ್ತು ದ್ರವ ಆಹಾರವನ್ನು ಸೇವಿಸಲೇಬೇಕಾಗುತ್ತದೆ. ಈ ಆಹಾರಗಳು ಆರೋಗ್ಯಕರವಾಗಿರುವ ಜೊತೆಗೇ ರುಚಿಕರವಾಗಿಯೂ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ರುಚಿಗೇ ಹೆಚ್ಚು ಮಹತ್ವ ನೀಡಿರುವ ಕಾರಣ ಇಂದು ದೇಹಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಸೇವಿಸಿ ದೇಹದ ಸೂಕ್ಷ್ಮ ಅಂಗಗಳ ಮೇಲೆ ಭಾರ ಹೇರುತ್ತಿದ್ದೇವೆ. ಹಾಗಾಗಿ ಹೀಗೆ ಕೊಂಚ ಪ್ರಮಾಣದ ದ್ರವಾಹಾರ ಹಾಗೂ ಪೋಷಕಾಂಶಗಳು ಬಳಕೆಯಾಗದೇ ದೇಹದಲ್ಲಿ ಸಂಗ್ರಹಗೊಳ್ಳತೊಡಗುತ್ತವೆ. ಈ ಹೆಚ್ಚುವರಿ ಘನ ಮತ್ತು ದ್ರವಾಹಾರಗಳು ಬಳಕೆಯಾಗದೇ ಹೋದರೆ ಇತರ ತ್ಯಾಜ್ಯಗಳೊಂದಿಗೆ ದೇಹ ವಿಸರ್ಜಿಸುತ್ತದೆ. ಈ ಸಂದರ್ಭದಲ್ಲಿ ಮೂತ್ರಪಿಂಡಕ್ಕೆ ಎದುರಾಗುವ ಅಪಾಯ ಬೆಳಕಿಗೆ ಬರುತ್ತದೆ. ಮೂತ್ರಪಿಂಡಗಳು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗಗಳಾಗಿದ್ದು ನಮ್ಮ ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತದೆ. ನಮ್ಮ ಹೊಟ್ಟೆಯ ಹಿಂಭಾಗದಲ್ಲಿ, ನಡುಬೆನ್ನಿನಲ್ಲಿರುವ ಪಕ್ಕೆಲುಬುಗಳ ಕೊಂಚವೇ ಕೆಳಗೆ ಬೆನ್ನುಮೂಳೆಯ ಎರಡೂ ಪಕ್ಕದಲ್ಲಿ ಎರಡು ಮೂತ್ರಪಿಂಡಗಳಿರುತ್ತವೆ. ಬೀನ್ಸ್ ಕಾಳುಗಳ ಆಕಾರದಲ್ಲಿರುವ ಈ ಮೂತ್ರಪಿಂಡಗಳು ವಯಸ್ಕರಲ್ಲಿ ಸುಮಾರು ನಾಲ್ಕೈದು ಇಂಚು ಉದ್ದ ಇರುತ್ತವೆ. ಈಗಾಗಲೇ ತಿಳಿದಿರುವಂತೆ ಈ ಅಂಗಗಳ ಪ್ರಮುಖ ಕಾರ್ಯವೆಂದರೆ ರಕ್ತವನ್ನು ಶೋಧಿಸಿ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ಮೂತ್ರದ ರೂಪದಲ್ಲಿ ಹೊರ ಹಾಕುವುದಾಗಿದೆ.

ಒಂದು ವೇಳೆ ಒಂದು ಅಥವಾ ಎರಡೂ ಮೂತ್ರಪಿಂಡಗಳು ತಮ್ಮ ಕಾರ್ಯದಲ್ಲಿ ವಿಫಲಗೊಂಡರೆ ಇದರಿಂದ ಹಲವಾರು ತೊಂದರೆಗಳು ಉದ್ಭವವಾಗುತ್ತವೆ. ವಿಷಕಾರಿ ವಸ್ತುಗಳು ದೇಹದಿಂದ ಹೊರಹೋಗದೇ ಇರುವ ಕಾರಣ ಇವು ದೇಹದಲ್ಲಿಯೇ ಉಳಿದು ಹಲವಾರು ತೊಂದರೆಗಳಿಗೆ, ಸೋಂಕುಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಮೂತ್ರನಾಳದ ಮೂಲಕ ಹಿಮ್ಮುಖವಾಗಿ ಮೂತ್ರಪಿಂಡವನ್ನು ಪ್ರವೇಶಿಸುವ ಕೆಲವು ಬ್ಯಾಕ್ಟೀರಿಯಾಗಳು ಮೂತ್ರಪಿಂಡಗಳ ಒಳಗೇ ಸೋಂಕು ಉಂಟುಮಾಡುತ್ತವೆ. ಆದರೆ ಈ ಸೋಂಕು ಸುಲಭವಾಗಿ ಕಾಣಬರುವುದಿಲ್ಲ. ಈ ಸೋಂಕಿನ ಅರಿವೇ ಇಲ್ಲದೇ ಹಾಗೇ ದಿನಗಳು ಮುಂದುವರೆಯುತ್ತಿದ್ದಂತೆಯೇ ಮೂತ್ರಪಿಂಡದಲ್ಲಿನ ಸೋಂಕು ಸಹಾ ಹೆಚ್ಚುತ್ತಾ ಕಲ್ಲುಗಳು ಮೂಡತೊಡಗುತ್ತವೆ ಹಾಗೂ ಇನ್ನೂ ಮುಂದುವರೆದು ಮೂತ್ರಪಿಂಡದ ವೈಫಲ್ಯಕ್ಕೇ ಕಾರಣವಾಗಬಹುದು. ಹಾಗಾಗಿ, ಒಂದು ವೇಳೆ ಮೂತ್ರಪಿಂಡದಲ್ಲಿ ಸೋಂಕು ಈಗಾಗಲೇ ಎದುರಾಗಿದ್ದರೆ ದೇಹ ಸೂಕ್ಷ್ಮವಾಗಿ ನೀಡುವ ಕೆಲವು ಸೂಚನೆಗಳಿಂದ ಇದರ ಇರುವಿಕೆಯನ್ನು ಕಂಡುಕೊಳ್ಳಬಹುದು ಹಾಗೂ ಆದಷ್ಟೂ ಬೇಗನೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಈ ಸೋಂಕಿನಿಂದ ಚೇತರಿಸಿಕೊಳ್ಳಬಹುದು. ಬನ್ನಿ, ಈ ಸೋಂಕಿನ ಇರುವಿಕೆಯನ್ನು ಸೂಚಿಸುವ ಏಳು ಸಂಜ್ಞೆಗಳು ಯಾವುವು, ಇವನ್ನೇಕೆ ಕಡೆಗಣಿಸಬಾರದು ಎಂಬುದನ್ನು ನೋಡೋಣ:

1. ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುವುದು ಒಂದು ವೇಳೆ ಸಾಮಾನ್ಯಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸದೆಯೂ ಸತತವಾಗಿ ಮೂತ್ರ ವಿಸರ್ಜನೆಗೆ ಅವಸರವಾಗುತ್ತಿದ್ದರೆ, ಅಥವಾ ಮಧುಮೇಹ ಇಲ್ಲದೇ ಇದ್ದರೆ ಅಥವಾ ನೀವು ಮಹಿಳೆಯಾಗಿದ್ದು ಗರ್ಭಿಣಿಯೂ ಆಗಿರದಿದ್ದರೆ ಇದು ಮೂತ್ರಪಿಂಡದಲ್ಲಿ ಸೋಂಕು ಉಂಟಾಗಿರುವ ಬಗ್ಗೆ ದೇಹ ಮೌನವಾಗಿ ನೀಡುತ್ತಿರುವ ಸ್ಪಷ್ಟ ಸಂಕೇತವಾಗಿದೆ. ಮೂತ್ರಪಿಂಡದ ಒಳಭಾಗದಲ್ಲಿರುವ ಅಂಗಾಂಶಗಳು ಬ್ಯಾಕ್ಟೀರಿಯಾಗಳ ಮೂಲಕ ಸೋಂಕಿಗೆ ಒಳಗಾಗಿದ್ದರೆ ಇಲ್ಲಿ ಉರಿಯೂತವುಂಟಾಗಿ ಉರಿ ಎದುರಾಗುತ್ತದೆ. ಇದು ಮೂತ್ರಕೋಶವನ್ನು ಪ್ರಚೋದಿಸಿ ಇದ್ದಷ್ಟು ಅಲ್ಪ ಪ್ರಮಾಣದ ಮೂತ್ರದ ಸಂಗ್ರಹವನ್ನೂ ವಿಸರ್ಜಿಸಲು ಸಂಕೇತ ನೀಡುವಂತೆ ಮಾಡುವುದರಿಂದಲೇ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತದೆ.

2. ಮೂತ್ರದಿಂದ ಕಟುವಾದ ಘಾಟುವಾಸನೆ ಸೂಸುವುದು ಒಂದು ವೇಳೆ ಮೂತ್ರ ವಿಸರ್ಜಿಸಿದ ಬಳಿಕ ಏನೋ ಕೊಳೆತಂತಹ ವಾಸನೆ ಬರುತ್ತಿದ್ದು ಇದು ನಿಮ್ಮ ಮೂತ್ರದಿಂದಲೇ ಎಂದು ಖಚಿತವಾದರೆ ಇದು ದೇಹ ನೀಡುವ ಇನ್ನೊಂದು ಸ್ಪಷ್ಟ ಸೂಚನೆಯಾಗಿದೆ. ಸಾಮಾನ್ಯವಾಗಿ ಮೂತ್ರದಿಂದ ಕೊಂಚ ವಾಸನೆ ಸದಾ ಹೊಮ್ಮುತ್ತದೆ ಹಾಗೂ ಈ ವಾಸನೆಯನ್ನು ನಮ್ಮ ಮೂಗು ಗ್ರಹಿಸೀ ಗ್ರಹಿಸೀ ಅಭ್ಯಾಸವಾಗಿಬಿಟ್ಟಿರುತ್ತದೆ. ಯಾವಾಗ ಸೋಂಕು ಎದುರಾಯಿತೋ ಆಗಿನಿಂದ ಪ್ರತಿಬಾರಿಯೂ ಮೂತ್ರವಿಸರ್ಜಿಸಿದಾಗ ಕಟುವಾದ ವಾಸನೆ ಹೊಮ್ಮುತ್ತದೆ. ಮೂತ್ರಪಿಂಡಗಳ ಒಳಗೆ ಸೋಂಕು ಎದುರಾದಾಗ ನಮ್ಮ ಜೀವನಿರೋಧಕ ವ್ಯವಸ್ಥೆ ಈ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡಿ ಬಿಳಿರಕ್ತಕಣಗಳು ಸಾಯುತ್ತವೆ. ಈ ಸತ್ತ ಜೀವಕೋಶಗಳನ್ನು ‘ಕೀವು’ (pus cells) ಎಂದು ಕರೆಯುತ್ತೇವೆ. ಗಾಯ ಸೋಂಕಿ ಒಳಗಾದರೆ ಮೂಡುವಂತಹ ಕೀವನ್ನೇ ಹೋಲುವ ಈ ಕೀವು ದುರ್ನಾತ ಹೊಂದಿದ್ದು ಮೂತ್ರದಲ್ಲಿ ಮಿಶ್ರಣಗೊಂಡು ಹೊರಬಿದ್ದಾಗ ದುರ್ನಾತವನ್ನು ಗಾಳಿಯಲ್ಲಿ ಪಸರಿಸತೊಡಗುತ್ತದೆ.

3. ಮೂತ್ರ ವಿಸರ್ಜಿಸಲು ಒತ್ತಡ ಹೇರಿದಾಗ ಎದುರಾಗುವ ನೋವು ಹಲವು ಸಮಯದಲ್ಲಿ, ಹೆಚ್ಚಿನವರು, ವಿಶೇಷವಾಗಿ ಮಹಿಳೆಯರು ಮೂತ್ರ ವಿಸರ್ಜಿಸಲು ಪ್ರಾರಂಭಿಸಿದಾಗ ಉರಿ ಅಥವಾ ನೋವಿನ ಅನುಭವವನ್ನು ಅನುಭವಿಸುತ್ತಾರೆ ಹಾಗೂ ಮೂತ್ರಕ್ಕೆ ಒತ್ತಡ ಹೇರಿದರೂ ಸಾಮಾನ್ಯಕ್ಕಿಂತಲೂ ತಡವಾಗಿ ಮೂತ್ರದ ಹರಿವು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಸೂಚನೆಯನ್ನು ಮೂತ್ರನಾಳದ ಸೋಂಕು ಎಂದೇ ಭಾವಿಸಿ ‘ಇನ್ನು ಕೊಂಚ ಹೆಚ್ಚು ನೀರು ಕುಡಿಯಬೇಕು’ ಎಂಬ ನಿರ್ಧಾರದೊಂದಿಗೆ ಈ ಸೂಚನೆಯನ್ನು ಇವರು ಅಲಕ್ಷಿಸಿಬಿಡುತ್ತಾರೆ. ಆದರೆ ಈ ತೊಂದರೆ ಒಂದು ಅಥವಾ ಎರಡು ದಿನಗಳಲ್ಲಿ ಕಡಿಮೆಯಾಗದೇ ಇದ್ದರೆ, ಹಾಗೂ ಇದರೊಂದಿಗೆ ಈ ಲೇಖನದಲ್ಲಿ ವಿವರಿಸಿರುವ ಬೇರೆ ಲಕ್ಷಣಗಳೂ ಕಂಡುಬಂದರೆ ಇದು ಸಹಾ ಮೂತ್ರಪಿಂಡದಲ್ಲಿ ಸೋಂಕು ಉಂಟಾಗಿರುವ ಸಂಜ್ಞೆ ಎಂದು ತಿಳಿದಿಕೊಳ್ಳಬೇಕು. ಮೂತ್ರಪಿಂಡದ ಸೋಂಕು ನಿಧಾನವಾಗಿ ಮೂತ್ರನಾಳ, ಮೂತ್ರಕೋಶ ಹಾಗೂ ಮೂತ್ರವ್ಯವಸ್ಥೆಯ ತುದಿಯವರೆಗೂ ತಲುಪಬಹುದು ಹಾಗೂ ಈ ನಾಳದ ಒಳಗೋಡೆಗಳಲ್ಲಿಯೂ ಸೋಂಕು ಹರಡಿ ಉರಿಗೆ ಕಾರಣವಾಗಬಹುದು.

4. ಮೂತ್ರ ವಿಸರ್ಜನೆಯ ಪ್ರಾರಂಭ ತೀರಾ ತಡವಾಗುವುದು. ಒಂದು ವೇಳೆ ಮೂತ್ರ ವಿಸರ್ಜಿಸಲು ಕುಳಿತ ಬಳಿಕವೂ ಕೊಂಚ ಹೊತ್ತಿನವರೆಗೂ ಮೂತ್ರದ ಹರಿವು ಪ್ರಾರಂಭವಾಗದೇ ಇದ್ದರೆ, ಇತರ ಸಮಯಕ್ಕಿಂತಲೂ ಇಂದು ಹೆಚ್ಚೇ ಸಮಯ ತೆಗೆದುಕೊಳ್ಳುತ್ತಿದ್ದು ಮೂತ್ರವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ಇದು ಸಹಾ ಮೂತ್ರಪಿಂಡದ ಸೋಂಕಿನ ಸಂಜ್ಞೆಯಾಗಿರಬಹುದು. ಒಂದು ವೇಳೆ ಈ ಸಮಯದಲ್ಲಿ ಮೂತ್ರ ವಿಸರ್ಜಿಸಲು ಹೆಚ್ಚಿಸುವ ಒತ್ತಡದಿಂದ ನೋವು ಕಾಣಿಸಿಕೊಂಡರೆ ಮೂತ್ರಪಿಂಡದಲ್ಲಿನ ಸೋಂಕು ತೀರಾ ಹೆಚ್ಚಾಗಿ ಒಳಗಿನ ಕೀವು ತುಂಬಾ ಸ್ನಿಗ್ಧರೂಪ ಪಡೆದಿದ್ದು ಮೂತ್ರದ ಹರಿವಿದೆ ಅಡ್ಡಿಪಡಿಸುತ್ತದೆ ಹಾಗೂ ಮೂತ್ರ ಈ ಗಾಢವಾದ ಕೀವನ್ನು ಕರಗಿಸಿಕೊಂಡು ಹೊರಬರುವಾಗ ತೀರಾ ತಡವಾಗುತ್ತದೆ.

5. ಬೆನ್ನುನೋವು ಮೂತ್ರಪಿಂಡಗಳು ನಮ್ಮ ಬೆನ್ನಿನ ಕೆಳಭಾಗದಲ್ಲಿ ಇರುತ್ತವೆ ಎಂದು ಈಗಾಗಲೇ ಅರಿತಿದ್ದೇವೆ. ಅಂತೆಯೇ ಮೂತ್ರಪಿಂಡಗಳಲ್ಲಿ ಸೋಂಕು ಎದುರಾದಾಗ ಈ ಭಾಗದ ಬೆನ್ನಿನಲ್ಲಿಯೂ ನೋವು ಎದುರಾಗುತ್ತದೆ. ಆದರೆ ಈ ನೋವು ಬೆನ್ನುಮೂಳೆ ಅಥವಾ ಸೊಂಟದ ಮೂಳೆಯ ಉರಿಯೂತದಿಂದ ಎದುರಾಗುವ ಸಾಮಾನ್ಯ ಬೆನ್ನುನೋವಿನಂತಿರದೇ ಬೆನ್ನಿನ ಎರಡೂ ಪಕ್ಕಗಳಲ್ಲಿ ಒಳಭಾಗದಲ್ಲಿ ಚಿಕ್ಕದಾಗಿ ಬೆಂಕಿ ಹೆಚ್ಚಿದಂತೆ ಚಿಕ್ಕದಾಗಿ ಉರಿಯತೊಡಗುತ್ತದೆ. ಈ ಉರಿ ಅಷ್ಟೇನೂ ಭೀಕರ ಎನಿಸದ ಕಾರಣ ಹೆಚ್ಚಿನವರು ಈ ಲಕ್ಷಣವನ್ನು ಉಪೇಕ್ಷಿಸುತ್ತಾರೆ. ಆದರೆ ಈ ಉರಿ ಸತತವಾಗಿ ಕಾಣಿಸಿಕೊಂಡರೆ ಮಾತ್ರ ಇದು ಮೂತ್ರಪಿಂಡಗಳಲ್ಲಿ ಏನೋ ತೊಂದರೆ ಇದೆ ಎಂಬ ಸ್ಪಷ್ಟ ಸೂಚನೆಯಾಗಿದ್ದು ತಕ್ಷಣವೇ ಪರೀಕ್ಷೆಗೊಳಪಡುವುದು ಅನಿವಾರ್ಯವಾಗಿದೆ.

6. ಮೂತ್ರದಲ್ಲಿ ರಕ್ತದ ಇರುವಿಕೆ ಒಂದು ವೇಳೆ ಮೂತ್ರದೊಂದಿಗೆ ರಕ್ತವೂ ಬರುತ್ತಿದ್ದು ಇದು ದುರ್ವಾಸನೆಯಿಂದ ಕೂಡಿದ್ದರೆ ಹಾಗೂ ಕೊಂಚ ನೋವಿನ ಅನುಭವವೂ ಆಗುತ್ತಿದ್ದರೆ ಇದು ಮೂತ್ರಪಿಂಡದಲ್ಲಿನ ಸೋಂಕಿನ ಸ್ಪಷ್ಟ ಸಂಕೇತವಾಗಿದೆ. ಆದರೆ ಈ ಸೂಚನೆ ಉಲ್ಬಣಗೊಂಡ ಬಳಿಕವೇ ಕಾಣಿಸತೊಡಗುತ್ತದೆ. ಮೂತ್ರಪಿಂಡದ ಒಳಗಿನ ಸೋಂಕು ವಿಪರೀತವಾಗಿ ಉರಿಯೂತವೂ ಅಪಾರವಾಗಿ ಹೆಚ್ಚಿರುವ ಕಾರಣ ಇಲ್ಲಿಂದ ರಕ್ತ ಜಿನುಗತೊಡಗುತ್ತದೆ. ಇದು ಮೂತ್ರದೊಂದಿಗೆ ಮಿಶ್ರಣಗೊಂಡು ಮೂತ್ರವಿಸರ್ಜನೆಯ ಮೂಲಕ ಪ್ರಕಟಗೊಳ್ಳುತ್ತದೆ.

7.ಫ್ಲೂ ಫ್ಲೂ ಎಂದರೆ ಒಂದು ಬಗೆಯ ಜ್ವರ. ವಾಸ್ತವವಾಗಿ ದೇಹದ ಯಾವುದಾದರೊಂದು ಭಾಗಕ್ಕೆ ವೈರಸ್ಸುಗಳು ಧಾಳಿ ಮಾಡಿದಾಗ ಈ ಧಾಳಿಯನ್ನು ಎದುರಿಸಲು ದೇಹದ ತಾಪಮಾನವನ್ನು ಹೆಚ್ಚಿಸಿ ರೋಗ ನಿರೋಧಕ ವ್ಯವಸ್ಥೆಯನ್ನು ಸನ್ನದ್ಧಗೊಳಿಸುವುದನ್ನೇ ನಾವು ಜ್ವರ ಎಂದು ಕರೆಯುತ್ತೇವೆಯೇ ವಿನಃ ಜ್ವರವೇ ನಿಜವಾದ ಕಾಯಿಲೆಯಲ್ಲ. ಹಾಗಾಗಿ ಫ್ಲೂ ಜ್ವರ ಆವರಿಸಿ ಮೇಲೆ ತಿಳಿಸಿದ ಸೂಚನೆಗಳಲ್ಲಿ ಕನಿಷ್ಟ ಒಂದಾದರೂ ಅನುಭವವಾದರೆ ತಕ್ಷಣವೇ ವೈದ್ಯರಿಂದ ಮೂತ್ರಪಿಂಡಗಳಲ್ಲಿ ಸೋಂಕು ಇರುವ ಬಗ್ಗೆ ಪರೀಕ್ಷೆಗೆ ಒಳಪಡಬೇಕು.

Leave a Reply

Top