ಗಣೇಶ ಚತುರ್ಥಿ ವಿಶೇಷ: ಮನೆಯಲ್ಲಿ ದೇವರ ಕೋಣೆ ಹೀಗೆ ಸಿಂಗರಿಸಿ….

ಎಲ್ಲರೂ ಕಾತುರದಿಂದ ಕಾಯುವ ಗಣೇಶ ಚತುರ್ಥಿ ಹಬ್ಬಕ್ಕೆ ವಿನಾಯಕ ಚತುರ್ಥಿ ಅಥವಾ ವಿನಾಯಕ ಚಾವಿತಿ ಎಂದೂ ಕರೆಯುತ್ತಾರೆ. ಭಾದ್ರಪದ ಶುಕ್ಲದ ಚೌತಿಯಂದು ಅಂದರೆ ಆಗಸ್ಟ್ ಸೆಪ್ಟೆಂಬರ್ ತಿಂಗಳ ಆಸುಪಾಸಿನಲ್ಲಿ ಆಗಮಿಸುವ ಗಣೇಶನ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬದ ಮೂಲಕ ಗಣೇಶನ ಜನ್ಮದಿನವನ್ನು ಆಚರಿಸಲಾಗುತ್ತದೆ ಹಾಗೂ ಹತ್ತೂ ದಿನಗಳ ಕಾಲ ಸಂತಸ ಸಂಭ್ರಮ, ಮನರಂಜನೆ, ಪಂದ್ಯ ಮೊದಲಾದವುಗಳ ಮೂಲಕ ಕಳೆಯುತ್ತಾರೆ.

ಬಾಲಗಂಗಾಧರ ತಿಲಕರು ಈ ಹಬ್ಬವನ್ನು ಯಾವಾಗ ಸಾರ್ವಜನಿಕ ಆಚರಣೆಯಾಗಿಸಿದರೋ ಆಗಿನಿಂದ ಈ ವಿಜೃಂಭಣೆ ರಸ್ತೆರಸ್ತೆಯಲ್ಲಿ ಕಾಣಬರುತ್ತದೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ವಿಜೃಂಭಣೆ ಕಾಣಬರುತ್ತದೆ. ಉಳಿದಂತೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿಯೂ ಹೆಚ್ಚಿನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶಿವ ಮತ್ತು ಪಾರ್ವತಿಯರ ಪುತ್ರನಾದ ಗಣೇಶ ವಿವೇಕ ಹಾಗೂ ಸಮೃದ್ಧಿಯ ಅಧಿಪತಿಯಾಗಿದ್ದು ಗಣೇಶನನ್ನು ಆರಾಧಿಸುವ ಮೂಲಕ ಶುಭ ಮತ್ತು ಪವಿತ್ರ ಕಾರ್ಯಗಳನ್ನು ಪ್ರಾರಂಭಿಸಿದರೆ ಆ ಕಾರ್ಯಗಳು ಸಿದ್ಧಿಸುತ್ತವೆ ಎಂದು ಹಿಂದೂ ಧರ್ಮೀಯರು ನಂಬುತ್ತಾರೆ. ಅಷ್ಟೇ ಅಲ್ಲ, ಯಾವುದೇ ಬಯಕೆ ಈಡೇರಬೇಕಾದರೆ ಗಣೇಶನ್ನು ಬೇಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ವರ್ಷದ ಗಣೇಶ ಚತುರ್ಥಿಯಂದು ಗಣೇಶನನ್ನು ಪೂಜಿಸಲು ನಿಮ್ಮ ಪೂಜಾಗೃಹವನ್ನು ಸರಳವಾಗಿ ಸಿಂಗರಿಸಲು ಕೆಲವು ಅಮೂಲ್ಯ ಮಾಹಿತಿಯನ್ನು ಇಂದು ನೀಡಲಾಗಿದೆ….

ಗಣೇಶ ಚತುರ್ಥಿಗೆ ಪೂಜಾಗೃಹದ ಸರಳ ಅಲಂಕಾರಗಳು

1. ಮನೆಗೆ ಬರುವ ಸಮೃದ್ಧಿ ಹಾಗೂ ನೆಮ್ಮದಿ ಈಶಾನ್ಯ ದಿಕ್ಕಿನಿಂದ ಬರುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯ ಈಶಾನ್ಯ ದಿಕ್ಕನ್ನು ಗುರುತಿಸಿ ಈ ದಿಕ್ಕಿನಿಂದ ಮನೆಯೊಳಗೆ ಬರುವ ಶಕ್ತಿಗೆ ಯಾವುದೇ ತಡೆಯಾಗದಂತೆ ನೋಡಿಕೊಳ್ಳಿ. ಈ ಸ್ಥಳ ಸ್ವಚ್ಛವಾಗಿ ಮತ್ತು ಶಾಂತವಾಗಿರುವಂತೆ ಕ್ರಮ ಕೈಗೊಳ್ಳಿ.

2. ವಿನಾಯಕ ಚತುರ್ಥಿ ಪ್ರಾರಂಭವಾಗುವ ಒಂದು ದಿನ ಮುನ್ನ ಮನೆಯನ್ನು ಸ್ವಚ್ಛವಾಗಿಸಿ. ಸಾಧ್ಯವಾದರೆ ಇಡಿಯ ಮನೆಯ ಎಲ್ಲಾ ವಸ್ತುಗಳನ್ನು ನಿವಾರಿಸಿ ಸ್ವಚ್ಛಗೊಳಿಸಿ. ಗಣೇಶನ ವಿಗ್ರಹ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಗಂಗಾಜಲವನ್ನು ಪ್ರೋಕ್ಷಳಿಸಿ ಈ ಸ್ಥಳದ ಸ್ವಚ್ಛತೆ ಹಾಗೂ ಪಾವಿತ್ರತೆಯನ್ನು ಹಬ್ಬ ಮುಗಿಯುವವರೆಗೂ ಕಾಪಾಡಿ.

3. ಪೂಜಾಗೃಹದ ಗೋಡೆಗಳನ್ನು, ವಿಶೇಷವಾಗಿ ಹಿಂಭಾಗದ ಗೋಡೆಯನ್ನು ಹಸಿರು, ಮುತ್ತಿನ ಬಿಳಿ, ಕೆಂಪು ಹಾಗೂ ಹಸಿರು ಬಣ್ಣಗಳ ಕಾಗದಗಳಿಂದ ಅಲಂಕರಿಸಿ ಅಥವಾ ಈ ಬಣ್ಣದ ಬಟ್ಟೆಗಳ ಪರದೆಗಳನ್ನು ಇಳಿಬಿಟ್ಟು ಅಲಂಕರಿಸಿ. ಗಣೇಶನಿಗೆ ಹಸಿರು ಬಣ್ಣ ಇಷ್ಟವಾಗಿದ್ದು ಇದರೊಂದಿಗೆ ನಡುನಡುವೆ ಹಳದಿ ಬಣ್ಣಗಳನ್ನು ಅಳವಡಿಸುವ ಮೂಲಕ ಹೆಚ್ಚು ಕಲಾತ್ಮಕವಾಗುವಂತೆ ಮಾಡಿ.

4. ನೆಲದ ಮೇಲೆ ಕೆಂಪು ಬಣ್ಣದ ರತ್ನಗಂಬಳಿ ಅಥವಾ ದಪ್ಪ ಬಟ್ಟೆಯನ್ನು ಹಾಸಿ ಇದರ ಮೇಲೆ ಮರದ ಅಥವಾ ಹಿತ್ತಾಳೆಯ ಮಣೆಯನ್ನಿರಿಸಿ ಇದರ ಮೇಲೆ ಪೂಜಾ ಸಲಕರಣೆಗಳನ್ನಿರಿಸಿ.

5. ಮಣೆಯನ್ನು ಕುಂಕುಮ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣದ ಬಟ್ಟೆಯಿಂದ ಆವರಿಸಿ ಇದರ ಮೂಲೆಗಳಲ್ಲಿ ದೀವಟಿಗೆಗಳನ್ನು ಬೆಳಗಿಸಿ ಪ್ರಕಾಶಮಾನವಾಗುವಂತಿರಿಸಿ.

6. ಗೋಡೆಗಳ ಮೇಲೆಯೂ ಬೆಳಕು ಬೀರುವ ಸೀರಿಯಲ್ ಲೈಟುಗಳು ಅಥವಾ ಗೋಡೆಗಳ ಕೆಳ ಅಂಚಿನುದ್ದಕ್ಕೂ ಚಿಕ್ಕ ಚಿಕ್ಕ ದೀವಟಿಗೆಗಳನ್ನು ಸೂರ್ಯಾಸ್ತದ ಬಳಿಕ ಹಚ್ಚಿ ಪೂಜಾಗೃಹವನ್ನು ಬೆಳಗಿಸಿ.

7. ಮಣೆಯ ನಡುವಣ, ಕೊಂಚ ಹಿಂಭಾಗದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ. ಮಣೆಯ ಖಾಲಿ ಜಾಗವನ್ನು ಹೂವುಗಳ ದಳಗಳಿಂದ ಅವರಿಸಿ, ಮಣಿಗಳು ಮತ್ತು ಶಂಖ, ಚಿಪ್ಪುಗಳಿಂದಲೂ ಅಲಂಕರಿಸಿ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿ.

8. ವಿಗ್ರಹದ ಒಂದು ಬದಿಯ ಮುಂಭಾಗದಲ್ಲಿ ಗಣೇಶನಿಗೆ ಪ್ರಿಯವಾದ ಹಣ್ಣುಗಳನ್ನು ಮತ್ತು ಹೂವುಗಳನ್ನಿರಿಸಿ ಹಾಗೂ ಇನ್ನೊಂದು ಬದಿಯಲ್ಲಿ ಬೆಳಗುವ ದೀಪ ಹಾಗೂ ಅಗರಬತ್ತಿಗಳನ್ನು ಇರಿಸಿ. ಪೂಜಾಗೃಹದಲ್ಲಿ ಸುವಾಸನೆ ಇರುವಂತೆ ಉತ್ತಮ ಗುಣಮಟ್ಟದ ಸುಗಂಧವನ್ನು ಸಿಂಪಡಿಸಿ ಅಥವಾ ಅಗರಬತ್ತಿಯನ್ನು ಹಚ್ಚಿಟ್ಟು ವಾತಾವರಣದಲ್ಲಿ ಪಾವಿತ್ರ್ಯತೆಯನ್ನುಂಟುಮಾಡಿ.

9. ಪೂಜೆಯ ತಟ್ಟೆಯಲ್ಲಿ ಮೊದಲಿಗೆ ಕೆಂಪುಬಟ್ಟೆಯನ್ನು ಹಾಸಿ ಇದರ ಮೇಲೆ ಕುಂಕುಮ, ಪ್ರಸಾದದ ರೂಪದಲ್ಲಿ ವಿತರಿಸಲು ಸಾಧ್ಯವಾಗುವಂತೆ ಅಕ್ಕಿ, ಹೂವುಗಳ ದಳಗಳು, ಕೊಂಚ ಸಿಹಿತಿಂಡಿಗಳನ್ನು ಹಾಗೂ ಕರ್ಪೂರವನ್ನು ಇರಿಸಿ.

10. ಗಣೇಶನ ವಿಗ್ರಹವನ್ನು ಹೂವಿನ ಹಾರದಿಂದ ಅಲಂಕರಿಸಿ. ಇನ್ನಷ್ಟು ಆಕರ್ಷಣೀಯವಾಗಿ ಕಾಣಲು ಹೂವು ಮತ್ತು ಸೂಕ್ತ ಉಡುಪುಗಳಿಂದ ಅಲಂಕರಿಸಿ.  ಮೇಲಿನ ಸೂಚನೆಗಳನ್ನು ಪಾಲಿಸುವ ಮೂಲಕ ಈ ವರ್ಷದ ಗಣೇಶನ ಹಬ್ಬವನ್ನು ಅತ್ಯಂತ ಸಂತಸದಿಂದ ಹಾಗೂ ಶ್ರದ್ದೆಯಿಂದ ಆಚರಿಸಿ ಗಣಪನ ಅನುಗ್ರಹಕ್ಕೆ ಪಾತ್ರರಾಗಿ.

Leave a Reply

Your email address will not be published. Required fields are marked *