ಪುರುಷನೊಬ್ಬನನ್ನು ನೋಡಿದಾಗ ಮಹಿಳೆಯರು ಸೂಕ್ಷ್ಮವಾಗಿ ಗಮನಿಸುವುದು ಏನು ಗೊತ್ತಾ?

ಪುರುಷರು ಮಹಿಳೆಯರಲ್ಲಿನ ಯಾವ ವಿಷಯಗಳನ್ನು ಗಹನವಾಗಿ ಗಮನಿಸುತ್ತಾರೆ ಎಂಬ ಬಗ್ಗೆ ತಿಳಿದೇ ಇದೆ. ಅವರ ಸೌಂದರ್ಯ, ನಿಲುವು, ಬಣ್ಣ, ನಗು ಮುಂತಾದ ವಿಷಯಗಳು ಪುರುಷರ ಆಸಕ್ತಿಯ ವಿಷಯಗಳಾಗಿರುತ್ತವೆ. ಆದರೆ ಮಹಿಳೆಯರು ಪುರುಷರಲ್ಲಿ ಆಸಕ್ತಿಯಿಂದ ಗಮನಿಸುವ ವಿಷಯಗಳು ಯಾವುವು ಎಂಬುದು ಕುತೂಹಲದ ವಿಷಯವಾಗಿದೆ.

ಹೊಸ ಪುರುಷನೊಬ್ಬನನ್ನು ನೋಡಿದಾಗ ಮಹಿಳೆಯರು ಸಹ ಕೆಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಹಿಳೆಯರು ಈ ರೀತಿ ಮಾಡುವುದು ಅಸಹಜವೇನಲ್ಲ. ಇದೊಂದು ನೈಸರ್ಗಿಕ ಹಾಗೂ ಸಹಜ ಪ್ರತಿಕ್ರಿಯೆಯೇ ಆಗಿದೆ. ಆದರೆ ಪುರುಷರು ಮಹಿಳೆಯರನ್ನು ಗಮನಿಸುವುದಕ್ಕೂ, ಮಹಿಳೆಯರು ಪುರುಷರನ್ನು ಗಮನಿಸುವುದಕ್ಕೂ ತುಸು ವ್ಯತ್ಯಾಸವಿದೆ. ಮಹಿಳೆಯರು ಪುರುಷರಲ್ಲಿ ಕೆಲ ನಿರ್ದಿಷ್ಟ ಹಾಗೂ ತಮಗೆ ಬೇಕಾದ ವಿಷಯಗಳನ್ನೇ ಮೊದಲು ಗಮನಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಹಾಗಾದರೆ ಮಹಿಳೆಯರು ಪುರುಷರಲ್ಲಿ ಯಾವೆಲ್ಲ ಅಂಶಗಳನ್ನು ಹುಡುಕುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳೋಣ. ಪುರುಷರಲ್ಲಿ ಮಹಿಳೆಯರು ಗಮನಿಸುವ ನಿರ್ದಿಷ್ಟ ವಿಷಯಗಳು ಹೀಗಿವೆ:

ಮುಗುಳು ನಗೆ

ಮಹಿಳೆಯರು ಪ್ರಥಮವಾಗಿ ಪುರುಷರ ಮುಗುಳುನಗೆಯ ಬಗ್ಗೆ ಗಮನಿಸುತ್ತಾರೆ. ಸದಾ ಮುಗುಳ್ನಗುತ್ತಿರುವ ಪುರುಷರೆಂದರೆ ಮಹಿಳೆಯರಿಗೆ ಒಂಥರಾ ಇಷ್ಟ. ಪುರುಷನ ನಗೆ ಅವರನ್ನು ಸ್ವಾಗತಿಸಿದಂತೆ ಭಾಸವಾಗುತ್ತದೆ. ಪ್ರಥಮ ಬಾರಿ ಯಾವುದೇ ಪುರುಷನನ್ನು ಭೇಟಿಯಾದಾಗ ಆತನ ನಗುವಿನಿಂದ ಮಹಿಳೆಗೆ ಒಂದು ರೀತಿಯ ಹಿತಾನುಭವ ಉಂಟು ಮಾಡುತ್ತದೆ. ಹೀಗಾಗಿ ಸುಂದರವಾದ ನಗು ಹಾಗೂ ಹೊಳೆಯುವ ದಂತಪಂಕ್ತಿಗಳ ಕಡೆಗೆ ಪುರುಷರು ಗಮನ ನೀಡುವುದು ಒಳಿತು.

ಪುರುಷನ ಮೈಕಟ್ಟು

ಬಹುತೇಕ ಪುರುಷರು ಉತ್ತಮ ಹಾಗೂ ಸದೃಢವಾದ ಮೈಕಟ್ಟು ಹೊಂದಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಜಿಮ್‌ಗಳಿಗೆ ಹೋಗಿ ದೇಹವನ್ನು ದಂಡಿಸುತ್ತಾರೆ. ಆದರೆ ಪುರುಷನ ಆಕರ್ಷಕ ಮೈಮಾಟದ ಬಗ್ಗೆ ಮಹಿಳೆಯರಿಗೆ ಅಷ್ಟೊಂದು ಆಸಕ್ತಿ ಇರುವುದಿಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಒಟ್ಟಾರೆಯಾಗಿ ಪುರುಷ ಸುಂದರವಾಗಿ ಕಂಡರೆ ಅವರಿಗೆ ಅಷ್ಟೇ ಸಾಕು. ತೀರಾ ಎತ್ತರ, ಕುಳ್ಳ ಅಥವಾ ತೆಳ್ಳಗೆ, ದಪ್ಪಗೆ ಇರುವವರು ಮಹಿಳೆಯರಿಗೆ ಅಷ್ಟೊಂದು ಇಷ್ಟವಾಗಲಾರರು. ಪುರುಷ ಆರೋಗ್ಯವಂತನಾಗಿದ್ದು, ನೋಡಲು ತುಸು ಸುಂದರನಾಗಿದ್ದರೆ ಸಾಕು ಎಂದುಕೊಳ್ಳುತ್ತಾರೆ ಮಹಿಳೆಯರು.

ಕಣ್ಣುಗಳ ಆಕರ್ಷಣೆ

ಪುರುಷನಲ್ಲಿ ಮಹಿಳೆ ಗಮನಿಸುವ ಮತ್ತೊಂದು ಮುಖ್ಯವಾದ ಅಂಶವೆಂದರೆ ಆತನ ಕಣ್ಣುಗಳು. ಪುರುಷನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮಹಿಳೆಯರು ನೋಟದಲ್ಲಿಯೇ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡುಬಿಡುತ್ತಾರೆ. ಅಷ್ಟೆ ಅಲ್ಲದೆ ತನ್ನತ್ತ ಆತನ ನೋಟ ಯಾವ ರೀತಿಯಾಗಿದೆ ಎಂಬುದನ್ನು ಸಹ ಮಹಿಳೆಯರು ಸಹಜವಾಗಿಯೇ ಗುರುತಿಸುತ್ತಾರೆ. ಇದೇ ಕಾರಣದಿಂದ ಹೆದರಿಸುವಂತೆ ನೋಡುವ ಪುರುಷರನ್ನು ಮಹಿಳೆಯರು ದೂರವೇ ಇಡಲು ಇಷ್ಟ ಪಡುತ್ತಾರೆ. ತನ್ನ ಬಗ್ಗೆ ಪುರುಷ ಏನು ಯೋಚಿಸುತ್ತಿದ್ದಾನೆ ಎಂಬುದನ್ನು ಕಣ್ಣಲ್ಲಿಯೇ ಅವರು ತಿಳಿಯಲು ಯತ್ನಿಸುತ್ತಾರೆ.

ನಿಲುವು ಹಾಗೂ ಆಕರ್ಷಣೆ

ಪುರುಷರ ತಲೆಗೂದಲು, ಬಟ್ಟೆ, ಫ್ಯಾಷನ್ ಮತ್ತು ಕನಿಷ್ಠ ಸ್ವಚ್ಛತೆಯ ಬಗ್ಗೆ ಮಹಿಳೆಯರು ಖಂಡಿತವಾಗಿಯೂ ಗಮನಿಸುತ್ತಾರೆ. ಕೆದರಿದ ಕೂದಲು, ಹೊಲಸಾದ ಬಟ್ಟೆ ಹಾಕಿದ್ದರೆ ಅಂಥ ಪುರುಷನ ಬಗ್ಗೆ ಮಹಿಳೆ ತೀರಾ ಆಸಕ್ತಿಯಿಂದ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾಗುವುದಿಲ್ಲ ಎಂಬುದು ಗೊತ್ತಿರಲಿ.

ಹಾಸ್ಯ ಪ್ರವೃತ್ತಿ

ಮಹಿಳೆಯರಿಗೆ ನವಿರಾದ ಹಾಸ್ಯದ ಸಂದರ್ಭಗಳು ಇಷ್ಟವಾಗುತ್ತವೆ. ಮತ್ತೊಬ್ಬರೊಂದಿಗೆ ನಕ್ಕು ಹಗುರಾಗಲು ಅವರು ಬಯಸುತ್ತಾರೆ. ಹೀಗಾಗಿ ಹಾಸ್ಯ ಪ್ರವೃತ್ತಿಯ ಪುರುಷರು ಮಹಿಳೆಯರಿಗೆ ಯಾವಾಗಲೂ ಇಷ್ಟವಾಗುತ್ತಾರೆ. ಆಗಾಗ ಹಾಸ್ಯ ಚಟಾಕಿ ಹಾರಿಸುತ್ತ, ತನ್ನನ್ನು ನಗಿಸುವ ಪುರುಷರ ಬಗ್ಗೆ ಮಹಿಳೆಯರಿಗೆ ಒಲವು ಜಾಸ್ತಿ.

ಸ್ವಭಾವ

ಪುರುಷನ ಸ್ವಭಾವ ಕೂಡ ಮಹಿಳೆಯರಿಗೆ ಅತ್ಯಂತ ಪ್ರಮುಖ ವಿಷಯವಾಗಿದೆ. ಪುರುಷನೊಬ್ಬ ತನ್ನೊಂದಿಗೆ ಹಾಗೂ ಇತರರೊಂದಿಗೆ ಯಾವ ರೀತಿ ವ್ಯವಹರಿಸುತ್ತಾನೆ ಎಂಬ ಬಗ್ಗೆ ಮಹಿಳೆಯರು ಒಂದು ಸೂಕ್ಷ್ಮ ಕಣ್ಣು ಇಟ್ಟು ಪರಿಶೀಲಿಸುತ್ತಿರುತ್ತಾರೆ. ತೀರಾ ಸಿಟ್ಟಿನಿಂದ ಹಾಗೂ ಅಗೌರವದಿಂದ ವರ್ತಿಸುವ ಪುರುಷರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲು ಅವರು ಬಯಸಲಾರರು.

ಸಂಭಾಷಣೆಯ ಶೈಲಿ

ಸಭ್ಯವಾಗಿ ನಡೆದುಕೊಳ್ಳುವ ಹಾಗೂ ಮೃದುವಾಗಿ ಮಾತನಾಡುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ. ಪುರುಷನ ಮಾತಕತೆಯ ಶೈಲಿ ಚೆನ್ನಾಗಿರಬೇಕೆಂದು ಮಹಿಳೆ ಬಯಸುತ್ತಾಳೆ. ಮಾತು ಹಾಗೂ ಕೃತಿ ಎರಡರಲ್ಲಿಯೂ ಪ್ರಾಮಾಣಿಕವಾಗಿರುವ ಪುರುಷರ ಬಗ್ಗೆ ಅವರಿಗೆ ಒಲವು ಹೆಚ್ಚು. ಹೀಗಾಗಿ ಪುರುಷರು ತಾವಿರುವಂತೆಯೇ ತೋರಿಸಿಕೊಳ್ಳುವುದು ಒಳ್ಳೆಯದು. ಅಂದರೆ ತೀರಾ ನಾಟಕೀಯವಾಗಿ ಮಾತನಾಡುವುದು ಮಹಿಳೆಯರಿಗೆ ಅಷ್ಟೊಂದು ಇಷ್ಟವಾಗಲಾರದು.

ಆತ್ಮವಿಶ್ವಾಸ

ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿರುವ ಪುರುಷರಿಗೆ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ. ಪುರುಷ ಎಷ್ಟು ಆತ್ಮವಿಶ್ವಾಸ ಹೊಂದಿದ್ದಾನೆ ಹಾಗೂ ಸಂದರ್ಭ ಬಂದಾಗ ಎಷ್ಟು ಸೂಕ್ತವಾಗಿ ನಿರ್ಣಯ ಕೈಗೊಳ್ಳಬಲ್ಲ ಎಂಬುದನ್ನು ಮಹಿಳೆ ಖಂಡಿತವಾಗಿಯೂ ಅಳೆದು ನೋಡುತ್ತಾಳೆ. ಆತ್ಮವಿಶ್ವಾಸ ಹೊಂದಿದ ವ್ಯಕ್ತಿಯು ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಹಿಳೆ ಈ ಅಂಶಗಳನ್ನು ಗಮನಿಸುತ್ತಾಳೆ.

ಪುರುಷನ ಉದ್ಯೋಗ

ಪುರುಷನೊಬ್ಬ ತನ್ನ ಬದುಕಿಗೆ ಯಾವ ಉದ್ಯೋಗ ಮಾಡುತ್ತಿದ್ದಾನೆ ಎಂಬುದು ಸಹ ಮಹಿಳೆಯರಿಗೆ ಪ್ರಮುಖವಾದ ವಿಷಯಗಳಲ್ಲೊಂದಾಗಿದೆ. ಆತ ಯಾವ ಕೆಲಸ ಮಾಡುತ್ತಾನೆ, ಎಷ್ಟು ಸಂಬಳ ಇರಬಹುದು ಹಾಗೂ ಆ ಕೆಲಸಕ್ಕೆ ಭದ್ರತೆ ಇದೆಯಾ ಎಂಬೆಲ್ಲ ವಿಷಯಗಳು ಮಹಿಳೆಗೆ ಆಸಕ್ತಿಕರ ಅಂಶಗಳಾಗಿವೆ. ಇಲ್ಲಿ ತಿಳಿಸಿರುವ ಅಂಶಗಳನ್ನು ಮಹಿಳೆಯು ಪುರುಷನಲ್ಲಿ ಸಾಮಾನ್ಯವಾಗಿ ಗಮನಿಸುತ್ತಾಳೆ. ಹೀಗಾಗಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಇಷ್ಟವಾಗುವಂತೆ ಇರಲು ನೀವೂ ಯತ್ನಿಸಿ.

Leave a Reply

Your email address will not be published. Required fields are marked *