fbpx

ದೇವಾಡಿಗ ವೆಲ್ಫೇರ್ ಅಸ್ಸೋಸ್ಸಿಯೇಶನ್ ಮುಂಬೈ ಇದರ 31 ನೇ ವಾರ್ಷಿಕೋತ್ಸವ ಸಮಾರಂಭ ಅಣ್ಣಯ್ಯ ಶೇರಿಗಾರ್ ಇವರಿಗೆ ದೇವಾಡಿಗ ರತ್ನ ಪ್ರಶಸ್ತಿ ಪ್ರಧಾನ.

ಮುಂಬಯಿ – ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 31 ನೇ ವಾರ್ಷಿಕೋತ್ಸವವು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ಜನವರಿ 20 ರಂದು ವಿಜೃಂಭಣೆಯಿಂದ ನೆರವೇರಿತು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸುರೇಶ್ ಡಿ. ಪಡುಕೋಣೆ, ಮುಖ್ಯ ಅತಿಥಿಯಾಗಿ ಆಗಮಿಸಿದ ಸುರೇಶ್ ಪೂಜಾರಿ (ಮಾಲಕರು ಸುಖಸಾಗರ ಗ್ರೂಫ್ ಆಫ್ ಹೊಟೇಲ್ಸ್), ಸಂಘದ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಶ್ರೀ ಏಕನಥೇಶ್ವೇರಿ ದೇವಸ್ಥಾನ ಕಟ್ಟಡ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಟ್ರಸ್ಟಿ ಎಚ್. ಮೋಹನ್ದಾಸ್, ಸಂಘದ ಉಪಾಧ್ಯಕ್ಷ ಎನ್.ಎನ್ ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ‘ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು’ ಈ ಭವ್ಯ ದೇವಾಲಯ ನಿರ್ಮಾಣದ ರೂವಾರಿ, ಜನಾನುರಾಗಿ ಅಣ್ಣಯ್ಯ ಶೇರಿಗಾರ್ ಇವರಿಗೆ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಸಂಘದ ವತಿಯಿಂದ ಸರ್ವಾನುಮತದಿಂದ, ಆತ್ಮೀಯತೆಯಿಂದ, ಅನ್ಯೋನ್ಯತೆಯಿಂದ ಚೆಂಡೆ ಮತ್ತು ಕೊಂಬು ನಿನಾದದೊಂದಿಗೆ ಮುಖ್ಯ ಅತಿಥಿಗಳಾದ ಸುರೇಶ್ ಪೂಜಾರಿ, ಸಂಘದ ಗೌರವಾಧ್ಯಕ್ಷ ಸುರೇಶ್ ಪಡುಕೋಣೆ , ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ಉಪಾಧ್ಯಕ್ಷ ಎನ್.ಎನ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ ದೇವಾಡಿಗ , ಶ್ರೀ ಏಕನಾಥೇಶ್ವರಿ ಕಟ್ಟಡ ಸಮಿತಿಯ ಟ್ರಸ್ಟಿ ಎಚ್. ಮೋಹನ್ದಾಸ್ ಹಾಗೂ ಸಂಘದ ಇತರ ಪದಾಧಿಕಾರಿಗಳು, ಗಣ್ಯರು ಮತ್ತು ಸಮಾರಂಭದಲ್ಲಿ ಉಪಸ್ಥಿತರಿರುವ ಸಮಸ್ತ ಸಮಾಜ ಬಾಂಧವ ಜನಸ್ತೋಮ ಉಪಸ್ಥಿತಿಯಲ್ಲಿ “ದೇವಾಡಿಗ ರತ್ನ” ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಸಂಘಕ್ಕೆ ಇದೊಂದು ಐತಿಹಾಸಿಕ ಹಾಗೂ ಎಂದೂ ಮರೆಯಲಾಗದ ಕ್ಷಣವಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಅಣ್ಣಯ್ಯ ಶೇರಿಗಾರರು ಮಾತನಾಡುತ್ತಾ, ನಾನು ಪ್ರಶಸ್ತಿಗೆ ಅರ್ಹನೋ ಎನ್ನುವುದು ಗೊತ್ತಿಲ್ಲ. ಯಾಕೆಂದರೆ ಅನೇಕರು ನನ್ನೊಂದಿಗೆ ಶ್ರೀ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ಯೋಜನೆಯಲ್ಲಿ ಸಹಕರಿಸಿದ್ದಾರೆ. ಆದರೂ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ನೀಡಿದ ಪ್ರಶಸ್ತಿಗೆ ನಾನು ಚಿರಋುಣಿ. ನಮ್ಮ ಸಮಾಜ ಬಾಂಧವರು ಭಾಷೆ, ಪ್ರಾಂತ್ಯಗಳನ್ನೂ ಮೀರಿ ನಿಲ್ಲಬೇಕೆಂಬ ಭಾವನೆಯನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಸುರೇಶ್ ಪೂಜಾರಿಯವರು ಮಾತನಾಡುತ್ತಾ, ಎಲ್ಲ ಜಾತಿ ಒಂದೇ. ನಾವು ಶಿಕ್ಷಿತರಾಗಿ ಸಮಸ್ತ ಹಿಂದುಳಿದ ವರ್ಗಗಳನ್ನು ಮೇಲೆತ್ತುವಲ್ಲಿ ಸಹಕರಿಸಬೇಕು. ಅಲ್ಲದೆ ನಾವು ಸಮಯ ಚಿತ್ತರಾಗಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಿಮ್ಮ ಸಂಘಕ್ಕೆ ನೆರವಾಗಲು ನಾನು ಯಾವಾಗಲೂ ಸದಾ ಸಿದ್ಧ ಎಂಬ ಭರವಸೆಯನ್ನು  ಈ ಸಂದರ್ಭದಲ್ಲಿ ಅವರು ನೀಡಿದರು.

ಸಭಾಧ್ಯಕ್ಷರಾದ ಸುರೇಶ್ ಪಡುಕೋಣೆ ಅವರು ಮಾತನಾಡುತ್ತಾ, ನಮ್ಮ ಸಮಾಜ ಬಾಂಧವರು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಪಾವನರಾಗಬೇಕು. ನಮ್ಮ ಏಳಿಗೆ ಸಾಧನೆಯಲ್ಲಿ ನಿರಂತರವಾಗಿ ಪರಿಶ್ರಮ ಇರಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶ್ರೀ ಏಕನಾಥೇಶ್ವರಿ ಕಟ್ಟಡ ಸಮಿತಿಯ ಟ್ರಸ್ಟಿ ಎಚ್. ಮೋಹನ್ದಾಸ್ ಮಾತನಾಡಿ, ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಿಸುವಲ್ಲಿ ಅಣ್ಣಯ್ಯ ಶೇರಿಗಾರ್ ಅವರೊಂದಿಗೆ ಸಹಕರಿಸಿದ ಸಂದರ್ಭವನ್ನು ನೆನೆಸಿಕೊಂಡು, ತುಳು-ಕನ್ನಡಿಗರು ಭಾಷೆಯಿಂದ ಬೇರೆಯಾಗದೆ ನಾವೆಲ್ಲರೂ ದೇವಾಡಿಗರು ಎಂಬ ಭಾವನೆ ಬೆಳೆಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು. 

ಅಂದು ಬೆಳಿಗ್ಗೆ ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವೈವಿಧ್ಯಮಯ ನೃತ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರಾಗಿ ಲಲಿತಾ ಅಂಗಡಿ, ಕುಮಾರಿ ಪ್ರಾಂಜಲಿ ರಾವ್ ಮತ್ತು ಕುಮಾರಿ ಸ್ನೇಹಲ್ ಹೆರೆಂಜಾಲ್ ಇವರು ಸಹಕರಿಸಿದರು. ಅವರಿಗೆ ಸಂಘದ ಅಧ್ಯಕ್ಷರು ಹೂಗುಚ್ಚ ನೀಡಿ ಅಭಿನಂದಿಸಿದರು. 
ಬೆಳಿಗ್ಗಿನ ಕಾರ್ಯಕ್ರಮಗಳ ತರುವಾಯ ಸಂಘದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮವು ನೆರವೇರಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


ಅಪರಾಹ್ನದ ಭೋಜನ ವಿರಾಮದ ನಂತರ ಕುಮಾರಿ ನಿಶೀತ ಅಶೋಕ್ ದೇವಾಡಿಗ ಇವರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಹಾಗೂ ವಾರ್ಷಿಕ ಕ್ರೀಡೋತ್ಸವದಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಮತ್ತು ಡಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು  ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಅತಿಥಿ ಗಣ್ಯರನ್ನು ಚೆಂಡೆ ಮತ್ತು ಕೊಂಬು ನಿನಾದದೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.


ಅತಿಥಿ ಗಣ್ಯರನ್ನು ಹಾಗೂ ಸಮಸ್ತ ಸಮಾಜ ಬಾಂಧವರನ್ನು ಜಿ.ಎ ದೇವಾಡಿಗರು ಹೃದಯಪೂರ್ವಕವಾಗಿ ಸ್ವಾಗತಿಸಿ, ಸಂಘದ ಕುರಿತಾಗಿ ಸಂಕ್ಷಿಪ್ತ ಮಾಹಿತಿಯನ್ನು ಸಭೆಗೆ ನೀಡಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಹಾಗೂ ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಇವರು ತಮ್ಮ ವಿಭಾಗಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ಸಭೆಗೆ ತಿಳಿಸಿದರು.


ಮುಖ್ಯ ಅಥಿತಿಯಾಗಿ ಹಾಜರಿರಬೇಕಾಗಿದ್ದ ಅಬ್ದುಲ್ ಮಾಟಿನ್ ಯಾಕೂಬ್ ಖಾನ್ ಅನಾರೋಗ್ಯದ ಕಾರಣ ಗೈರುಹಾಜರಾಗಿದ್ದು, ಸಂಘದ ಉಪಾಧ್ಯಕ್ಷ ಎನ್.ಎನ್ ದೇವಾಡಿಗರು ಇವರನ್ನು ಸಭೆಗೆ ಪರಿಚಯಿಸಿ ಅವರು ಶೀಘ್ರವೇ ಅನಾರೋಗ್ಯದಿಂದ ಚೇತರಿಸಿ ಕೊಳ್ಳಬೇಕೆಂದು ಹಾರೈಸಿದರು.


ಸಭಾ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಬಿ.ಎಂ ದೇವಾಡಿಗ ಮತ್ತು ಜಿ.ಎ ದೇವಾಡಿಗರು ನಿರೂಪಿಸಿದರು. ಹಾಗೆಯೇ ಬೆಳಗ್ಗಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶೋಕ್ ದೇವಾಡಿಗ ಮತ್ತು ರೋಹಿತ್ ದೇವಾಡಿಗ ಇವರು ನಿರೂಪಿಸಿದರು. 
ಮಾಜಿ ಅಧ್ಯಕ್ಷರಾದ ಎಸ್.ವಿ ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್. ದೇವಾಡಿಗ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.
ಜೊತೆ ಕಾರ್ಯದರ್ಶಿ ಪ್ರಭಾಕರ ದೇವಾಡಿಗ ಇವರು ವಂದಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *