ಹೆರಿಗೆ ವೈದ್ಯೆಯ ನಿರ್ಲಕ್ಷ್ಯ ಆರೋಪ: ಬಾಣಂತಿ ಸುಜಾತ ದೇವಾಡಿಗ ಸಾವು.

ಕುಂದಾಪುರ: ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ವರದಿ ಬಂದಿದ್ದರೂ ವೈದ್ಯೆಯ ನಿರ್ಲಕ್ಷ್ಯದಲ್ಲಿ ಸಾಮಾನ್ಯ ಹೆರಿಗೆ ಮಾಡಿಸಿದ ಬಳಿಕ ಬಾಣಂತಿ ಸಾವನ್ನಪ್ಪಿದ್ದಾರೆ ಎನ್ನಲಾದ ಘಟನೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಅಂಕದಕಟ್ಟೆಯ ನಿವಾಸಿ ಸುಧೀರ್ ದೇವಾಡಿಗ ಎಂಬುವರ ಪತ್ನಿ ಸುಜಾತ(೨೭) ಎಂಬುವರೇ ಸಾವನ್ನಪ್ಪಿದ ದುರ್ದೈವಿ.

ಸೆಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುಧೀರ್ ದೇವಾಡಿಗರಿಗೆ ಒಂದು ರ್ಷದ ಹಿಂದಷ್ಟೇ ವಿವಾಹವಾಗಿತ್ತು. ಗರ್ಭಿಣಿಯಾದ ಬಳಿಕ ಕುಂದಾಪುರದ ಸರ್ಕಾರೀ ಆಸ್ಪತ್ರೆಯಲ್ಲಿಯೇ ತಪಾಸಣೆ ನಡೆಸಿದ್ದು, ಎಂಟು ತಿಂಗಳ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಿದಾದ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ವರದಿಯಲ್ಲಿ ಹೇಳಿತ್ತು ಎಂದು ಮನೆಯರು ತಿಳಿಸಿದ್ದಾರೆ. ಆದರೆ ವೈದ್ಯೆ ತಾನು ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.

ಡಿಸೆಂಬರ್ ೧೧ರಂದು ಹೆರಿಗೆಗಾಗಿ ಕುಂದಾಪುರದ ಸರ್ಕಾರೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ ೧೩ರಂದು ಅತಿಯಾದ ಹೊಟ್ಟೆನೋವು ತಾಳಲಾರದೇ ಸಿಸೆರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಹೇಳಿದ್ದರೂ ಕೂಡಾ ವೈದ್ಯೆ ನಿರ್ಲಕ್ಷ್ಯತೋರಿದ್ದು, ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ. ವೈದ್ಯೆ ನಾನಾನೀನಾ ಎಂದು ಗದರಿದ್ದರು ಎಂದು ಸುಜಾತ ಪತಿ ಹೇಳಿದ್ದಾರೆ. ಅದರಂತೆ ಡಿಸೆಂಬರ್ ೧೪ರಂದು ವೈದ್ಯ ಹೆರಿಗೆ ಮಾಡಿಸಿದ್ದು, ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ತೀರ ರಕ್ತಸ್ರಾವ ಆಗಿದ್ದು, ಇದರಿಂದ ಅಸ್ವಸ್ಥರಾದ ಸುಜಾತ ಪ್ರಜ್ಞೆಕಳೆದುಕೊಂಡಿದ್ದಾರೆ. ತಕ್ಷಣ ಗಾಬರಿಗೊಂಡ ವೈದ್ಯೆ ಇತರ ಇಬ್ಬರು ವೈದ್ಯರ ಜೊತೆಗೆ ಸುಜಾತರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಗರ್ಭಕೋಶ ತೆಗೆಯುಉದಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದು, ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಎರಡು ಲಕ್ಷ ರೂಪಾಯಿಗಳ ಬಿಲ್ ಆಗಿದೆ. ಕಡು ಬಡತನದಲ್ಲಿರುವ ಸುಧೀರ್ ಈ ಬೆಳವಣಿಗೆಯಿಂದ ಕಂಗಾಲಾಗಿದ್ದು, ದಿಕ್ಕುಕಾಣದಾಗಿದ್ದಾರೆ. ಪತ್ನಿಯ ಸಾವಿಗೆ ಹೆರಿಗೆ ವೈದ್ಯೆ ರಜನಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಅರು ಆರೋಪಿಸಿದ್ದು, ಈ ಬಗ್ಗೆ ನ್ಯಾಯ ದೊರಕದೇ ಇದ್ದರೆ ವೈದ್ಯೆಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಇದೀಗ ಮಗು ತಾಯಿಯಿಲ್ಲದ ತಬ್ಬಲಿಯಾಗಿದ್ದಾಳೆ.

ಸರ್ಕಾರೀ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ನೀಡಬೇಕಾಗಿರುವ ವೈದ್ಯರು ರಿಸ್ಕ್ ಬೇಡ ಎನ್ನುವ ಕಾರಣಕ್ಕೆ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿಲ್ಲ ಎನ್ನುವ ಆರೋಪಗಳು ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, ಪ್ರಕರಣದಿಂದಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *