ನಮ್ಮ ಬಗ್ಗೆ…

‘ದೇವಾಡಿಗ ಜನಾಂಗ – ಒಂದು ಸಾಂಸ್ಕೃತಿಕ ಅಧ್ಯಯನ’

‘ತುಳುನಾಡು’ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಭಾಷಿಕವಾಗಿ ಕರ್ನಾಟಕದಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡಿರುವ ಭೂಪ್ರದೇಶವಾಗಿದೆ. ದಟ್ಟವಾದ ಅರಣ್ಯ ಪ್ರದೇಶಗಳು ಹಾಗೂ ಬೃಹತ್ ಬೆಟ್ಟಗುಡ್ಡಗಳಿಂದ ಕೂಡಿರುವ ಈ ನಾಡು ಹಚ್ಚ ಹಸುರಿನಿಂದ ಕೂಡಿದ್ದು ಭೌಗೋಳಿಕ ಸೌಂದರ್ಯವನ್ನು ಹೊಂದಿದೆ. ಪಶ್ಚಿಮದಲ್ಲಿರುವ ಅರಬ್ಬಿ ಸಮುದ್ರವು ಹಲವು ಕಾರಣಗಳಿಂದಾಗಿ ತುಳುನಾಡಿಗೆ ವರದಾನವಾಗಿದೆ. ಇದು ಅನೇಕ ಬಂದರು ಪಟ್ಟಣಗಳ ಹುಟ್ಟಿಗೂ ಕಾರಣವಾಯಿತು. ಇವು ವ್ಯಾಪಾರ ವಾಣಿಜ್ಯದ ದೃಷ್ಟಿಯಿಂದ ತುಳುನಾಡಿನ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಿವೆ. ತುಳುನಾಡು ವಿದೇಶಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಇವು ಪ್ರಮುಖವಾದ ಕಾರಣಗಳಾಗಿವೆ.

ಭಾರತವು ಹಲವು ಜನಾಂಗಗಳಿಂದ ತುಂಬಿದ ಸಮೃದ್ಧವಾದ ದೇಶವಾಗಿದೆ. ಭಾರತದ ವಿವಿಧ ಜನಾಂಗಗಳು ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಇಂತಹ ಜನಾಂಗಗಳಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುವ ದೇವಾಡಿಗ ಜನಾಂಗವೂ ಒಂದು. ಶತಮಾನಗಳಿಂದ ನೆಲೆಸಿರುವ ದೇವಾಡಿಗ ಸಮುದಾಯದವರು ಕರಾವಳಿ ಕರ್ನಾಟಕದಲ್ಲಿ ಭಟ್ಕಳದಿಂದ ಪುತ್ತೂರಿನವರೆಗೆ ನೆಲೆಸಿದ್ದಾರೆ. ಪುತ್ತೂರಿನಿಂದ ಬಾರಕೂರುನವರೆಗೆ ನೆಲೆಸಿರುವ ದೇವಾಡಿಗ ಜನಾಂಗದವರ ಮನೆಮಾತು ತುಳು ಆಗಿದೆ. ಬಾರಕೂರಿನ ನಂತರದ ಪ್ರದೇಶದಲ್ಲಿ ನೆಲೆಸಿರುವ ದೇವಾಡಿಗ ಜನಾಂಗದವರು ಕನ್ನಡ ಭಾಷೆ ಮಾತನಾಡುತ್ತಾರೆ. ದೇವಾಡಿಗ ಜನಾಂಗವು ತನ್ನದೇ ಆದ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ದೇವಾಡಿಗ ಜನಾಂಗ ಕರಾವಳಿ ಕರ್ನಾಟಕದ ಒಂದು ಸಣ್ಣ ಸಮುದಾಯ. ಈ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಸಂಸ್ಕೃತಿಗಳಿವೆ. ಒಂದು ಕಾಲದಲ್ಲಿ ದೇವಾಲಯದ ಪರಿಚಾರಿಕೆಯಲ್ಲಿ ನಿರತವಾಗಿದ್ದ ದೇವಾಡಿಗರು ತಮ್ಮ ಹೊಟ್ಟೆಪಾಡಿಗಾಗಿ ಕೃಷಿಯನ್ನು ಅವಲಂಬಿಸಿಕೊಂಡಿದ್ದರು. ಇಂದು ಕೆಲ ಮಧ್ಯಮ ವರ್ಗದಲ್ಲಿರುವ ದೇವಾಡಿಗರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶ್ರಮ ಸಂಸ್ಕೃತಿಗೆ ಹೆಸರಾದ ಈ ಸಮಾಜದ ಹಲವು ಜನರು ಇಂದು ಜಗತ್ತಿನೆಲ್ಲೆಡೆ ನೆಲೆಸಿರುವುದು ಗಮನೀಯ ಅಂಶ. ದೇವಾಡಿಗ ಸಮಾಜದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಒಟ್ಟಾಗಿ ಅವರ ಸಂಸ್ಕೃತಿಯನ್ನು ಈ ಸಂಪ್ರಬಂಧದಲ್ಲಿ ವಿಭಿನ್ನ ನೆಲೆಗಳ ಮೇಲೆ ಬೆಳಕು ಹಾಯಿಸಲಾಗಿದೆ. ದೇವಾಡಿಗ ಸಮಾಜದ ಕುರಿತು ಈವರೆಗೆ ಯಾವುದೇ ಸಮಗ್ರ ಅಧ್ಯಯನ ನಡೆದಿರಲಿಲ್ಲ. ಭಾರತದಂತಹ ಸಂಕೀರ್ಣವಾದ ನಾಡಿನಲ್ಲಿ ತಳವರ್ಗಕ್ಕೆ ಸೇರಿದ ಸಮುದಾಯ ಒಂದರ ಕಥನವನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. ಈ ಮೂಲಕ ದೇವಾಡಿಗ ಸಮಾಜ ನಡೆದು ಬಂದ ದಾರಿಯನ್ನು ಇಲ್ಲಿ ಚಿತ್ರಿಸಲಾಗಿದೆ. ದೇವಾಡಿಗ ಸಮಾಜದ ಜನರ ಹಿಂದಿನ ಸ್ಥಿತಿಗತಿ, ಸ್ಥಿತ್ಯಂತರಗಳನ್ನು ಇಲ್ಲಿ ಕಲೆಹಾಕಿ ಚರ್ಚಿಸಲಾಗಿದೆ. ಕರ್ನಾಟಕದ ಉಪ ಸಂಸ್ಕೃತಿಗಳಲ್ಲಿ ಒಂದಾದ ದೇವಾಡಿಗ ಸಮುದಾಯದ ಜನಾಂಗ, ಸಂಸ್ಕೃತಿಗಳ ವಿವರವನ್ನು ಇಲ್ಲಿ ದಾಖಲಿಸಲಾಗಿದೆ.

ಪಶ್ಚಿಮದಲ್ಲಿ ಅರಬ್ಬೀಸಮುದ್ರ ಮತ್ತು ಪೂರ್ವದಲ್ಲಿ ಸಹ್ಯಾದ್ರಿ ಶ್ರೇಣಿಯ ನಡುವೆ ಇರುವ ಈ ಭೂಭಾಗ ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಆಚರಣೆಯನ್ನು ಹೊಂದಿದೆ. ಯಕ್ಷಗಾನ ಮತ್ತು ಭೂತಾರಾಧನೆಯಂತಹ ಆಚರಣೆಗಳನ್ನು ಕೇವಲ ತುಳುನಾಡಿನಲ್ಲಿ ಮಾತ್ರ ಕಾಣಬಹುದು. ಸಮುದ್ರದ ನಿಕಟ ಸಂಪರ್ಕ ಹೊಂದಿದ ಇಲ್ಲಿಯ ಜನರಿಗೆ ಮೀನುಗಾರಿಕೆ ಒಂದು ಪ್ರಮುಖ ಉದ್ಯೋಗವಾಗಿದೆ. ಅದಲ್ಲದೆ ವ್ಯವಸಾಯ ಹೆಚ್ಚಿನ ಜನರ ಜೀವನವೃತ್ತಿಯಾಗಿದೆ. ವ್ಯವಸಾಯದ ಜೊತೆ ಜೊತೆಗೇ ಒಂದು ಸಮಾಜಕ್ಕೆ ಅವಶ್ಯವಿರುವ ಇತರ ಕಸುಬುಗಳನ್ನು ಹೊಂದಿರುವ ಜನರೂ ಇಲ್ಲಿದ್ದಾರೆ. ಕಾಲಕ್ರಮೇಣ ಈ ಕಸುಬುಗಳೇ ಜಾತಿ ಪಂಗಡವಾಗಿ ಪರಿವರ್ತಿತವಾಗಿದೆ. ಇಲ್ಲಿ ಬಂಟ, ಮೊಗವೀರ, ಬಿಲ್ಲವ, ಪದ್ಮಶಾಲಿ, ವಿಶ್ವಕರ್ಮ, ದೇವಾಡಿಗ, ಕುಲಾಲ, ಬ್ರಾಹ್ಮಣ, ಸಾರಸ್ವತ ಮುಂತಾದ ಜನಾಂಗದವರು ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶಿಷ್ಟ ಸಂಪ್ರದಾಯಗಳು ಇವೆ. ಇಲ್ಲಿ ಶತಮಾನಗಳಿಂದ ನೆಲೆಸಿರುವ ದೇವಾಡಿಗ ಸಮುದಾಯದವರು ಕರಾವಳಿ ಕರ್ನಾಟಕದಲ್ಲಿ ಭಟ್ಕಳದಿಂದ ಪುತ್ತೂರಿನವರೆಗೆ ನೆಲೆಸಿದ್ದಾರೆ. ದೇವಾಡಿಗ ಜನಾಂಗದವರ ಮನೆಮಾತು ತುಳು. ಬಾರ್ಕೂರು ನಂತರ ನೆಲೆಸಿರುವ ದೇವಾಡಿಗ ಜನಾಂಗದವರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.

ದೇವಾಡಿಗ ಸಮುದಾಯದ ಇಂದಿನ ಜನಸಂಖ್ಯೆ ಸುಮಾರು ಮೂರು ಲಕ್ಷ (2011ರ ಜನಗಣತಿಯ ಪ್ರಕಾರ ದೇವಾಡಿಗರ ಜನಸಂಖ್ಯೆ 2,83,625. 2018ರಲ್ಲಿ 3,00,000) ವಾಗಿದೆ. ಬೇರೆ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಇವರ  ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ದೇವಾಡಿಗ ಜನಾಂಗದ ಸಾಂಸ್ಕೃತಿಕ ಹಿನ್ನಲೆಯನ್ನು ಪರಿಶೀಲಿಸಿ ಅವರು ನಡೆದು ಬಂದಿರುವ ಹಾದಿಯನ್ನು ದಾಖಲಿಸುವುದು ಈ ಸಂಶೋಧನೆಯ ಮೂಲ ಉದ್ದೇಶವಾಗಿದೆ. ಇಂತಹ ವಿಶಿಷ್ಟ ಜನ ಸಮುದಾಯದ ಜನಾಂಗೀಯ ಅಧ್ಯಯನವನ್ನು ವಿವಿಧ ಉದ್ದೇಶಗಳಿಂದ ಕೈಗೊಳ್ಳಲಾಗಿದೆ.  ಈಗಾಗಲೇ ಒಂದು ರೀತಿಯಲ್ಲಿ ನಶಿಸುತ್ತಿರುವ ದೇವಾಡಿಗ ಜನಾಂಗದ ಸಂಸ್ಕೃತಿಯನ್ನು ದಾಖಲಿಸುವುದು ಈ ಅಧ್ಯಯನದ ಉದ್ದೇಶವಾಗಿದೆ.
ದೇವಾಡಿಗರ ಜನಾಂಗಕ್ಕೆ ತುಳುನಾಡಿನ ನೆಲದೊಂದಿಗಿನ ಸಂಬಂಧ ಬಹಳ ಪುರಾತನವಾದುದು. ಪ್ರಾಚೀನ ಹಾಗೂ ಮಧ್ಯಮ ಕಾಲಗಳಲ್ಲಿ ಈ ಮೂಲದ ಜನರು ಸಮಾಜದಲ್ಲಿ ಬಾಳಿ ಬದುಕಿರುವ ಅವರ ಸಾಮಾಜಿಕ, ಸಾಂಸಾರಿಕ, ಧಾರ್ಮಿಕ ಜೀವನದ ಸ್ವರೂಪ ಮತ್ತು ವೈಶಿಷ್ಟ್ಯ, ಸಂಸ್ಕಾರ, ಸಂಪ್ರದಾಯ, ರೀತಿ-ರಿವಾಜು, ನೀತಿ, ನಿಯಮ, ನಡವಳಿಕೆ, ನಂಬಿಕೆ, ಆರಾಧನೆ, ಆಚರಣೆ, ಕೂಡುಕಟ್ಟುಗಳ ವೃತ್ತಿ, ಸಾಂಘಿಕ ಶಕ್ತಿ, ಕುಲಧರ್ಮ, ಜೀವನದಲ್ಲಿ ಪಾಲಿಸಿಕೊಂಡು ಬಂದಿರುವ ಆದರ್ಶಗಳು. ಸತ್ಯಧರ್ಮ, ನ್ಯಾಯಗಳ ಉಳಿವಿಗಾಗಿ ನಡೆಸಿದ ಹೋರಾಟಗಳು, ಇವೆಲ್ಲವುಗಳು ಬಹಳ ಆಸಕ್ತಿಪೂರ್ಣ ವಿಚಾರಗಳಾಗಿವೆ. ಲಿಖಿತ ರೂಪದ ಮತ್ತು ಇವುಗಳ ದಾಖಲೆ ಅತ್ಯವಶ್ಯಕವಾಗಿದೆ. ದೇವಾಡಿಗ ಜನಾಂಗದವರು ಬದುಕು ಸಾಗಿಸಿದ ರೀತಿ, ಕುಟುಂಬ ಪದ್ಧತಿ, ನೌಕರಿ, ನ್ಯಾಯ, ವ್ಯವಸ್ಥೆ, ಕೂಡು ಕುಟುಂಬಗಳ ವಸತಿ ವ್ಯವಸ್ಥೆ, ಮನೋರಂಜನೆಯ ಬಹುಬಗೆಯ ಜೀವನಾವರ್ತನದ ಆಚರಣೆಗಳು, ಆರಾಧನೆಗಳು, ಶಿಕ್ಷಣ, ಸಂಘ-ಸಂಸ್ಥೆಗಳು ಹಣಕಾಸು ಸಾಧನೆಗಳು, ಹೀಗೆ ದೇವಾಡಿಗ ಜನಾಂಗದ ವಿಕಾಸಕ್ಕೆ ಕಾರಣವಾಗಿರುವ ವಿಚಾರಗಳು ದಾಖಲಾಗದೆ ಉಳಿದಿರುವುದು ಈ ಅಧ್ಯಯನದ ಅಗತ್ಯತೆಯನ್ನು ಎತ್ತಿ ಹಿಡಿದಿದೆ. ಶಿಕ್ಷಣ, ವೃತ್ತಿ, ಮನರಂಜನೆ, ಸಾಹಿತ್ಯ ಚಟುವಟಿಕೆಗಳನ್ನು ದೇವಾಡಿಗ ಜನಾಂಗದವರು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಸಜೀವಗೊಳಿಸುವ ನಿಟ್ಟಿನಲ್ಲಿ ಆದರ್ಶಪ್ರಾಯವಾಗುವಂತಹ ಸಾಧನೆಗಳನ್ನು ಮಾಡಿದ್ದಾರೆ. ದೇವಾಡಿಗ ಜನಾಂಗದವರು ಮಾಡಿದ ಸಾಧನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಕೂಡ ಈ ಅಧ್ಯಯನದ ಅಂಶಗಳಲ್ಲಿ ಒಂದಾಗಿದೆ.

ದೇವಾಡಿಗರ ದೈವಭಕ್ತಿಯ ಹಿಂದೆ ಕಾಣಿಸಿಕೊಳ್ಳುವ ಅವರ ಧಾರ್ಮಿಕ ಪ್ರಜ್ಞೆಯ ಜೀವನ ಸ್ವರೂಪ, ಆರಾಧನೆಯ ವಿಧಿ-ವಿಧಾನಗಳಲ್ಲಿ ಹುದುಗಿರುವ ಆತ್ಮ ನಿವೇದನೆಯ ಸಮರ್ಪಣಾ ಭಾವ, ಹಬ್ಬ-ಪುಣ್ಯದಿನಗಳ ಆಚರಣೆಯ ವೈಶಿಷ್ಟ್ಯ, ದೈವ ದೇವರು, ಧರ್ಮದ ಬಗೆಗೆ ಅವರಿಗಿರುವ ಭಯಭಕ್ತಿ, ನಂಬಿಕೆ, ಒಲವು, ಆಚರಣೆಯ ವಿಧಿವಿಧಾನಗಳಲ್ಲಿ ಅವರು ತೋರುವ ಶ್ರದ್ಧೆ, ಅರ್ಚನೆ, ಆರಾಧನೆಗಳಿಂದ ಪಡೆಯುವ ನೆಮ್ಮದಿ, ಬದುಕಿನ ಕಷ್ಟಕಾರ್ಪಣ್ಯಗಳ ನಿವಾರಣೆಗಾಗಿ ಧಾರ್ಮಿಕ ನೆಲೆಯಲ್ಲಿ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ತಾವು ಹೇಳಿಕೊಂಡಿರುವ ಹರಕೆಗಳನ್ನು ಸಲ್ಲಿಸುವುದರಲ್ಲಿ ಅವರಿಗಿರುವ ಶ್ರದ್ಧೆ, ಭಕ್ತಿ ಅವುಗಳನ್ನು ನೆರವೇರಿಸಿದಾಗ ಪಡೆಯುವ ಧನ್ಯತಾ ಭಾವ, ಅವುಗಳ ಸ್ವರೂಪ ದೇವಾರಾಧನೆ, ಭೂತಾರಾಧನೆಗಳು, ಅರ್ಚನೆಯ ವಿಧಿವಿಧಾನದ ವಿಚಾರ ಈ ಮೊದಲಾದ ದೇವಾಡಿಗ ಜನಾಂಗದ ಸಂಸ್ಕೃತಿಯ ಕುರುಹುಗಳನ್ನು ದಾಖಲಿಸುವುದು ಈ ಸಂಪ್ರಬಂಧದ ಮಹತ್ತರ ಉದ್ದೇಶವಾಗಿದೆ.

ಒಂದು ಜನಾಂಗವು ನೆಮ್ಮದಿಯಿಂದ ಬದುಕಬೇಕಾದರೆ ಆ ಜನಾಂಗಗಳಲ್ಲಿ ಅನೇಕ ನೀತಿನಿಯಮಗಳು ಕಟ್ಟುಕಟ್ಟಳೆಗಳು ಇರುತ್ತವೆ. ಇಂತಹ ಕಟ್ಟುಕಟ್ಟಳೆಗಳನ್ನು ಅತ್ಯಂತ ಶ್ರದ್ಧೆ, ನಂಬಿಕೆಯಿಂದ ರೂಢಿಸಿಕೊಂಡಿರಲಾಗುತ್ತದೆ. ಯಾವುದೇ ನಂಬಿಕೆಗಳು ಒಂದು ಸಮುದಾಯದ ಒಳಿತಿಗಾಗಿ ಮಾಡಲ್ಪಟ್ಟವುಗಳಾಗಿವೆ. ಅವುಗಳನ್ನು ಬರೇ ಮೂಢನಂಬಿಕೆಗಳು ಎಂದು ಅಲ್ಲಗಳೆಯುವಂತಿಲ್ಲ. ನಂಬಿಕೆಗಳು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ದೇವಾಡಿಗ ಸಮುದಾಯದಲ್ಲಿಯೂ ಹಲವಾರು ನಂಬಿಕೆಗಳಿವೆ. ದೇವಾಡಿಗ ಸಮುದಾಯದವರು ತಮ್ಮ ಪೂರ್ವಜರಿಂದ ಪರಂಪರಾಗತವಾಗಿ ಸಾಗಿ ಬಂದಿರುವ ತಮ್ಮದೇ ಆದ ಹಬ್ಬಹರಿದಿನಗಳನ್ನು ಬಗೆ ಬಗೆಯಾಗಿ ಆಚರಿಸಿಕೊಂಡು ಬಂದಿದ್ದಾರೆ. ದೇವಾಡಿಗ ಸಮುದಾಯದವರ  ಹಬ್ಬಗಳ ಆಚರಣೆಯಲ್ಲಿ ಭಿನ್ನತೆ ಹಾಗೂ ಜೀವಂತಿಕೆಯನ್ನು ಕಾಣಬಹುದು. ಇವರು ಅಪಾರವಾದ ಧಾರ್ಮಿಕ ನಂಬಿಕೆಯನ್ನು ಉಳ್ಳವರಾಗಿದ್ದು, ಬಹುದೇವತಾ ಆರಾಧಕರು. ದೇವರ ಬಗ್ಗೆ ಅಚಲವಾದ ಶ್ರದ್ಧಾಭಕ್ತಿಯನ್ನು ಹೊಂದಿದ್ದಾರೆ. ನಿಸರ್ಗವನ್ನು ನಿಯಂತ್ರಿಸುವ ದೇವರನ್ನು ಒಲಿಸಿಕೊಳ್ಳುವ ಸತತ ಪ್ರಯತ್ನ ಇವರ ಆಚರಣೆಯ ಉದ್ದೇಶವಾಗಿದೆ. ದೇವಾಡಿಗ ಸಮುದಾಯದವರ ಹಬ್ಬಗಳ ಆಚರಣೆಯ ಕ್ರಮವನ್ನು ಇಲ್ಲಿ ವರ್ಣಾತ್ಮಕವಾಗಿ ಚಿತ್ರಿಸಲಾಗಿದೆ. ದೇವಾಡಿಗ ಸಮುದಾಯದವರ ಜೀವನಾವರ್ತದ ಪದ್ಧತಿಗಳ ಕಡೆಗೆ ಗಮನಹರಿಸಿದಾಗ ಹುಟ್ಟಿನಿಂದ ಸಾವಿನವರೆಗೆ ನಡೆಯುವ ವಿಧಿ ವಿಧಾನಗಳು ಹಲವು ವೈಶಿಷ್ಟ್ಯಪೂರ್ಣ ಜನಪದ ಆಚರಣೆಗಳಿಂದ ಕೂಡಿರುವುದು ಕಂಡುಬರುತ್ತದೆ. ದೇವಾಡಿಗ ಜನಾಂಗದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವರು. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ, ರಾಜಕೀಯ, ವೈದ್ಯಕೀಯ, ಕ್ರೀಡೆ, ಉದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯನ್ನು ದಾಖಲಿಸಲಾಗಿದೆ. ಬಡತನ ತೊಡಕಾದರೂ ಎದೆಗುಂದದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾದ ದೇವಾಡಿಗ ಜನಾಂಗಗಳ ಶ್ರಮಸಂಸ್ಕೃತಿಯ ಕುರಿತು ಇಲ್ಲಿ ಅಧ್ಯಯನ ನಡೆಸಲಾಗಿದೆ.

ದೇವಾಡಿಗ ಸಮಾಜದ ಸಾಧಕರ ಸಾಧನೆಯ ಹಿನ್ನಲೆಯನ್ನು ಈ ಸಂಪ್ರಬಂಧದಲ್ಲಿ ಚರ್ಚಿಸಲಾಗಿದೆ. ಪ್ರಮುಖವಾಗಿ ಒಂದೆರಡು ಉದಾಹರಣೆಗಳನ್ನು ಕೊಡುವುದಾದರೆ, ರಾಜಕೀಯ ಕ್ಷೇತ್ರದಲ್ಲಿ ವೀರಪ್ಪ ಮೊಲಿಯವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸಾಹಿತ್ಯದಲ್ಲೂ ಒಲವಿರುವ ಅಪರೂಪದ ವ್ಯಕ್ತಿಯಾಗಿದ್ದಾರೆ. ರಿಷಂಕ್ ದೇವಾಡಿಗರವರು ಅಂತಾರ್ರಾಷ್ಟ್ರೀಯ ಕಬಡ್ಡಿ ಕ್ರೀಡೆಯಲ್ಲಿ ಸಾಧನೆಗೈದಿದ್ದಾರೆ. ಹರೀಶ್ ಶೇರಿಗಾರ್ ದುಬಾ ಅವರು ಉದ್ಯಮಿಯಾಗಿ, ಕನ್ನಡ -ತುಳು ಸಿನೆಮಾ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದಾರೆ. ಹೀಗೆ ಒಟ್ಟು ದೇವಾಡಿಗ ಜನಾಂಗದ ಪರಂಪರೆ, ಸಂಸ್ಕೃತಿ, ಬೆಳವಣಿಗೆ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಚಯಿಸಿ ದೇವಾಡಿಗ ಜನಾಂಗದ ಹಿರಿಮೆ ಗರಿಮೆಗಳನ್ನು ಒಂದೆಡೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಈ ಸಂಪ್ರಬಂಧದ್ದಾಗಿದೆ.

( ಬರಹಗಾರ್ತಿ)

Ms.Surekha Devadiga, Mumbai
surekhadevadiga29@gmail.com

( ಮುಂಬಯಿ: ಕನ್ನಡ ವಿಬಾಗದ ಸಂಶೋಧನ ವಿದ್ಯಾರ್ಥಿ ಸುರೇಖಾ ದೇವಾಡಿಗ ಅವರು ಬರೆದ ಸಲ್ಲಿಸಿದ “ದೇವಾಡಿಗ ಜನಾಂಗ-ಒಂದು ಸಾಂಸ್ಕøತಿಕ ಅಧ್ಯಯನ “ಶೋಧ ಸಂಪ್ರಬಂಧಕ್ಕೆ ಮುಂಬಯಿ ವಿಶ್ವ ವಿದ್ಯಾಲಯ ಎಂ.ಫಿಲ್ ಪದವಿ ನೀಡಿದೆ.)